ADVERTISEMENT

ಆಶಾಭಾವ ಮೂಡಿಸಿದ ‘ಲೇಪಾಕ್ಷಿ ಕದರಿ’ ಶೇಂಗಾ ತಳಿ

ಹೆಚ್ಚು ರೋಗ ನಿರೋಧಕ ಶಕ್ತಿ * ಮುಂಗಾರು ಖುಷ್ಕಿಗೆ ಸೂಕ್ತ

ಕೊಂಡ್ಲಹಳ್ಳಿ ಜಯಪ್ರಕಾಶ
Published 3 ಜೂನ್ 2021, 4:47 IST
Last Updated 3 ಜೂನ್ 2021, 4:47 IST
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಬಳಿಯ ಹೊಲವೊಂದಲ್ಲಿ ಬಿತ್ತನೆ ಮಾಡಿದ್ದ ಕದರಿ ಲೇಪಾಕ್ಷಿ ಶೇಂಗಾ.
ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರ ಬಳಿಯ ಹೊಲವೊಂದಲ್ಲಿ ಬಿತ್ತನೆ ಮಾಡಿದ್ದ ಕದರಿ ಲೇಪಾಕ್ಷಿ ಶೇಂಗಾ.   

ಮೊಳಕಾಲ್ಮುರು: ಸತತವಾಗಿ ಶೇಂಗಾ ನಾಟಿ ಮಾಡಿ ನಷ್ಟಕ್ಕೀಡಾಗುತ್ತಿರುವ ತಾಲ್ಲೂಕಿನ ಶೇಂಗಾ ಬೆಳೆಗಾರರಿಗೆ ನೂತನ ‘ಕದರಿ ಲೇಪಾಕ್ಷಿ ತಳಿ’ ಶೇಂಗಾ ಆಶಾಭಾವ ಮೂಡಿಸಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮಿರುವ ಖುಷ್ಕಿ ಪ್ರದೇಶದ ಪ್ರಮುಖ ಬೆಳೆಯಾಗಿರುವ ಶೇಂಗಾ ಈಚಿನ ವರ್ಷಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ರೋಗ ಬಾಧೆಯಿಂದಾಗಿ ರೈತರ ಕೈಹಿಡಿದಿಲ್ಲ. ಹಲವರು ಇದರ ಸಹವಾಸ ಸಾಕು ಎಂದು ವಿಮುಖವಾಗುತ್ತಿರುವ ಸಮಯದಲ್ಲಿ ಹೊಸದಾಗಿ ಸೀಮಾಂಧ್ರದ ಕದರಿ ಕೃಷಿ ಸಂಶೋಧನಾ ಕೇಂದ್ರ ಸಿದ್ಧಪಡಿಸಿರುವ ‘ಕದರಿ ಲೇಪಾಕ್ಷಿ ತಳಿ’ ರೈತರಿಗೆ ನೆರವಾಗುವ ವಿಶ್ವಾಸ ಮೂಡಿಸಿದೆ.

ತಾಲ್ಲೂಕಿನಲ್ಲಿ ಈ ವರ್ಷ ಕೊಂಡ್ಲಹಳ್ಳಿ ವೆಂಕಟೇಶ್, ಕೋನಸಾಗರದ ತಿಪ್ಪೇಸ್ವಾಮಿ, ಹಾನಗಲ್‌ನ ನಾಗರಾಜ್ ಎಂಬುವವರು ಅವರು ಕದರಿ ತಳಿಯನ್ನು ನೀರಾವರಿಯಲ್ಲಿ ನಾಟಿ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ. ಪ್ರತಿ ಎಕರೆಗೆ ಸರಾಸರಿ 20 ಕ್ವಿಂಟಲ್‌ಗಳಷ್ಟು ಇಳುವರಿ ಪಡೆದಿದ್ದಾರೆ. ಇದು ಇತರ ತಳಿಗಳಿಗೆ ಹೋಲಿಕೆ ಮಾಡಿದಲ್ಲಿ ದುಪ್ಪಟ್ಟಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್, ‘ತಾಲ್ಲೂಕಿನಲ್ಲಿ ಈವರೆಗೆ 90 ವರ್ಷಕ್ಕೂ ಹಳೆಯಾದ ಟಿಎಂವಿ-2 ತಳಿಯನ್ನು ಬಿತ್ತನೆಮಾಡಲಾಗುತ್ತಿದೆ. ಇದಕ್ಕೆ ಹೆಚ್ಚು ಮಳೆ ಬೇಕು, ಬೇರು ರೋಗ, ಎಲೆ ಕಪ್ಪುಚುಕ್ಕೆ ರೋಗಬಾಧೆಯಿಂದ ಬೆಳೆ ಹಾನಿಯಾಗುತ್ತಿದೆ. ಆದರೆ ಕದರಿ ತಳಿ ಇದಕ್ಕೆ ನಿರೋಧಕತೆ ಹೊಂದಿದೆ. ಇದನ್ನು 2019 ನವೆಂಬರ್‌ನಲ್ಲಿ ಕದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಇನ್ನೂ ನಮ್ಮ ರಾಜ್ಯಸರ್ಕಾರ ಅನುಮೋದನೆ ನೀಡಿಲ್ಲ’ ಎಂದು ಮಾಹಿತಿ ನೀಡಿದರು.

‘ಕದರಿ ತಳಿ ಪ್ರತಿ ಎಕರೆಗೆ ನೀರಾವರಿಯಲ್ಲಿ 20 ಕ್ವಿಂಟಲ್ ಮತ್ತು ಖುಷ್ಕಿಯಲ್ಲಿ 14 ಕ್ವಿಂಟಲ್ ಇಳುವರಿ ನೀಡುತ್ತದೆ ಎನ್ನಲಾಗಿದೆ. ಟಿಎಂವಿ ತಳಿ ಪ್ರತಿ ಎಕರೆಗೆ ಕ್ರಮವಾಗಿ 4–5 ಹಾಗೂ 8–10 ಕ್ವಿಂಟಲ್ ನೀಡುತ್ತಿದೆ. ಟಿಎಂವಿ ತಳಿಯಲ್ಲಿ ಶೇ 48ರಷ್ಟು ಎಣ್ಣೆ ಅಂಶವಿದ್ದರೆ, ಕದರಿ ತಳಿಯಲ್ಲಿ ಶೇ 51ರಷ್ಟಿದೆ. ಕದರಿ ತಳಿ ಎಣ್ಣೆಗೆ ಹೆಚ್ಚು ಬಳಕೆಯಾದರೆ ಟಿಎಂವಿ ತಿನ್ನಲು ಹೆಚ್ಚು ಬಳಸಲಾಗುತ್ತಿದೆ. ಕದರಿ ತಳಿ ಮಾರುಕಟ್ಟೆ ದರ ಟಿಎಂವಿಗಿಂತ ಹೆಚ್ಚಿದೆ. ಈ ಅಂಶಗಳ ಆಧಾರದಲ್ಲಿ ತಾಲ್ಲೂಕಿನಲ್ಲಿ ಮುಂಗಾರು ಖುಷ್ಕಿ ಬಿತ್ತನೆಗೆ ಹೆಚ್ಚು ಸೂಕ್ತವಾಗಿದೆ’ ಎಂದರು.

ಸರ್ಕಾರದ ಗಮನಕ್ಕೆ ತರಲಾಗುವುದು
‘ಕದರಿ ತಳಿ ಬಿತ್ತನೆ ಮಾಡಿರುವ ರೈತರಿಂದ ರೈತರು ಬಿತ್ತನೆ ಬೀಜ ಪಡೆಯಬೇಕಿದೆ. ಪ್ರತಿ ಕ್ವಿಂಟಲ್‌ಗೆ ₹ 11,000ರಿಂದ ₹ 12,000 ದರವಿದೆ. ಕದರಿ ವಿ.ವಿ.ಯ ವಿಜ್ಞಾನಿಗಳು ರೈತರು ಹಣ ಪಾವತಿ ಮಾಡಿದಲ್ಲಿ ಬಿತ್ತನೆ ಬೀಜ ಕೊಡಿಸುವುದಾಗಿ ಹೇಳಿದ್ದಾರೆ. ಈ ತಳಿಯ ಸಾಧಕ, ಬಾಧಕಗಳ ಬಗ್ಗೆ ನಮ್ಮ ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಅವಕಾಶ ಮಾಡುವಂತೆ ಕೋರಲಾಗುವುದು’ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ಹೇಳಿದರು.

*
ಹಾನಗಲ್‌ನ ನಾಗರಾಜ್ ಅವರು ಪ್ರತಿ ಎಕರೆಗೆ ನೀರಾವರಿಯಲ್ಲಿ ಸರಾಸರಿ 21 ಕ್ವಿಂಟಲ್ ಇಳುವರಿ ಪಡೆದಿದ್ದಾರೆ. ತಾಲ್ಲೂಕಿನಲ್ಲಿ ಇದು ಸಾಧನೆಯೇ ಸರಿ.
- ವಿ.ಸಿ. ಉಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.