ADVERTISEMENT

ಹಿರಿಯೂರು: ಸಾಧನೆ ಹಿಂದೆ ಎಲ್ಲರ ಮಾರ್ಗದರ್ಶನ

ಜಿಲ್ಲೆಗೆ ಟಾಪರ್ ಆದ ಯು. ಭರತ್ ಮಾತು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 4:11 IST
Last Updated 10 ಆಗಸ್ಟ್ 2021, 4:11 IST
ಪೋಷಕರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿರುವ ಯು. ಭರತ್‌
ಪೋಷಕರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿರುವ ಯು. ಭರತ್‌   

ಹಿರಿಯೂರು:ನಗರದ ಹುಳಿಯಾರು ರಸ್ತೆಯಲ್ಲಿರುವ ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಯು. ಭರತ್‌ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದು, ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.

ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಿರೀಶ್ ಉತ್ತಂಗಿ ಹಾಗೂ ಹಿರಿಯೂರಿನ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಜ್ಞಾನ ಶಿಕ್ಷಕಿಯಾಗಿರುವ ವಿ.ಉಷಾ ಅವರ ಕಿರಿಯ ಪುತ್ರ ಭರತ್ ಸಾಧನೆ ಪೋಷಕರಲ್ಲಿ, ಶಾಲಾ ಶಿಕ್ಷಕರಲ್ಲಿ ಸಂಭ್ರಮ ತಂದಿದೆ.

‘ನನ್ನ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ, ಮನೆಯಲ್ಲಿ ಅಪ್ಪ–ಅಮ್ಮನ ಪ್ರೋತ್ಸಾಹ, ನಿತ್ಯ ಮನಸ್ಸಿಟ್ಟು ವ್ಯಾಸಂಗದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದು ಕಾರಣ. ಕೊರೊನಾ ಸೋಂಕಿನ ಕಾರಣಕ್ಕೆ ಎಲ್ಲಿ ವಾರ್ಷಿಕ ಪರೀಕ್ಷೆ ನಡೆಯುವುದಿಲ್ಲವೋ ಎಂದು ಆತಂಕವಾಗಿತ್ತು. ಪರೀಕ್ಷೆ ನಡೆಸದೆ ನಾವು ಎಷ್ಟೇ ಅಂಕ ಪಡೆದರೂ ಅದರಿಂದ ಈಗಿನ ತೃಪ್ತಿ ಸಿಗುತ್ತಿರಲಿಲ್ಲ. ನನ್ನ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬಂದಿದೆ. ಖುಷಿಯಾಗಿದೆ. ಮುಂದೆ ವೈದ್ಯನಾಗುವ ಬಯಕೆ ಇದೆ’ ಎನ್ನುತ್ತಾನೆ ಭರತ್.

ADVERTISEMENT

‘ಭರತ್‌ನ ಅಕ್ಕ ಯು. ಹರ್ಷಿತ ಪ್ರಸ್ತುತ ಬಳ್ಳಾರಿಯ ವಿಮ್ಸ್ ಕಾಲೇಜಿನಲ್ಲಿ ಸರ್ಕಾರಿ ಸೀಟು ಪಡೆದು ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಆಕೆಯೂ ಪ್ರತಿಭಾವಂತೆ. ಅಕ್ಕನ ಹಾದಿಯಲ್ಲಿಯೇ ಭರತ್ ಸಾಗುತ್ತಿರುವುದು ಸಂತಸದ ಸಂಗತಿ. ಆನ್‌ಲೈನ್ ತರಗತಿಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಶಿಕ್ಷಕರಿಗೆ ತೋರಿಸುತ್ತಿದ್ದುದು, ಸಮಯ ವ್ಯರ್ಥ ಮಾಡದೆ ಓದುತ್ತಿದ್ದುದು ಮಗನ ಸಾಧನೆಗೆ ಕಾರಣ. ಟಾಪರ್ ಆಗುತ್ತಾನೆ ಎಂಬ ವಿಶ್ವಾಸವಿತ್ತು. ನಮ್ಮ ನಂಬಿಕೆ ಹುಸಿಯಾಗಲಿಲ್ಲ’ ಎನ್ನುತ್ತಾರೆ ಭರತ್ ತಾಯಿ ಉಷಾ.

ಭರತ್ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಬೋಧಕ ವರ್ಗದವರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.