ADVERTISEMENT

ಭೀತಿ ಸೃಷ್ಟಿಸಿದ ಶಾಸಕರ ಮಾತು: ಆರೋಪ

ಎಂ.ಚಂದ್ರಪ್ಪ ಆಡಿದ ಮಾತಿಗೆ ಮಾಜಿ ಸಚಿವ ಎಚ್‌.ಆಂಜನೇಯ ಕಿಡಿ

​ಪ್ರಜಾವಾಣಿ ವಾರ್ತೆ
Published 17 ಮೇ 2021, 12:45 IST
Last Updated 17 ಮೇ 2021, 12:45 IST
ಎಚ್.ಆಂಜನೇಯ
ಎಚ್.ಆಂಜನೇಯ   

ಚಿತ್ರದುರ್ಗ: ಕೊರೊನಾ ಸೋಂಕು ಎಲ್ಲೆಡೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಕಲ್ಪಿಸಲು ಕ್ರಮಕೈಗೊಳ್ಳಬೇಕಾದ ಶಾಸಕ ಎಂ.ಚಂದ್ರಪ್ಪ ಅವರು ನಿರ್ಲಕ್ಷ್ಯದಿಂದ ಆಡಿದ ಮಾತು ಜನರಲ್ಲಿ ಭೀತಿ ಸೃಷ್ಟಿಸಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆರೋಪಿಸಿದ್ದಾರೆ.

‘ಜಿಲ್ಲಾ ಆರೋಗ್ಯಾಧಿಕಾರಿ ತಪ್ಪು ಮಾಡಿದರೆ ಅಥವಾ ಮಾತು ಕೇಳದಿದ್ದರೆ ಅಧಿಕಾರ ಚಲಾಯಿಸಬೇಕು. ಇದು ಜನಪ್ರತಿನಿಧಿಗಳ ಹೊಣೆಗಾರಿಕೆ ಕೂಡ ಹೌದು. ಕರ್ತವ್ಯ ಪ್ರಜ್ಞೆ ಮರೆತು ಆಸ್ಪತ್ರೆ ತೆರೆಯಲು ಅವಕಾಶ ನೀಡುವುದಿಲ್ಲ ಎಂಬುದು ತಪ್ಪು. 50 ಹಾಸಿಗೆಯ ಆಸ್ಪತ್ರೆಗೆ ಸಿದ್ಧತೆ ನಡೆಸುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ದಬ್ಬಾಳಿಕೆ ಮಾಡಿದ್ದು ಖಂಡನೀಯ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಎಂ.ಚಂದ್ರಪ್ಪ ಅವರು ಕ್ಷೇತ್ರ ಸುತ್ತಿದರೂ ಜನರ ಆರೋಗ್ಯ ವಿಚಾರಿಸಿಲ್ಲ. ಗ್ರಾಮೀಣ ಪ್ರದೇಶದ ಕೋವಿಡ್‌ ಆರೈಕೆ ಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳನ್ನು ಪರಿಶೀಲಿಸಿಲ್ಲ. ಕ್ಷೇತ್ರದಲ್ಲಿ ಆರೋಗ್ಯ ಸೇವೆ ಸಂಪೂರ್ಣ ಹದಗೆಟ್ಟಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಪುರದಲ್ಲಿ ₹ 2.5 ಕೋಟಿ ಹಾಗೂ ರಾಮಗಿರಿಯಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದೆ. ಚುನಾವಣೆ ಎದುರಾಗಿದ್ದರಿಂದ ಉದ್ಘಾಟನೆ ಸಾಧ್ಯವಾಗಲಿಲ್ಲ. ಮೂರು ವರ್ಷವಾದರೂ ಈ ಕಟ್ಟಡ ಉದ್ಘಾಟಿಸದೇ ಶಾಸಕ ಚಂದ್ರಪ್ಪ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಶಾಸಕರು ಆಸ್ಪತ್ರೆ ಬೇಡವೆಂದು ಹೇಳಿಲ್ಲ’

ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವ ಸಮಯದಲ್ಲಿ ಯಾವ ಶಾಸಕರೂ ಆಸ್ಪತ್ರೆ ಬೇಡವೆಂದು ಹೇಳುವುದಿಲ್ಲ. ಶಾಸಕ ಎಂ.ಚಂದ್ರಪ್ಪ ಅವರೂ ಆಸ್ಪತ್ರೆ ಬೇಡವೆಂಬ ಅರ್ಥದಲ್ಲಿ ಮಾತನಾಡಿಲ್ಲ ಎಂದು ಬಿಜೆಪಿ ಹೊಳಲ್ಕೆರೆ ಮಂಡಲ ಅಧ್ಯಕ್ಷ ಎಂ.ಬಿ.ಸಿದ್ದೇಶ್‌ ತಿಳಿಸಿದ್ದಾರೆ.

‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ 50 ಹಾಸಿಗೆ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸೂಚಿಸಿದ್ದರು. ಉದ್ಘಾಟನೆ ಸಂದರ್ಭದಲ್ಲಿ ಕೇವಲ 10 ಹಾಸಿಗೆಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ಹಾಸಿಗೆಗೆ ಆಮ್ಲಜನಕ ಸೌಲಭ್ಯ ಕಲ್ಪಿಸಿದರೆ ಮಾತ್ರ ಆಸ್ಪತ್ರೆ ಉದ್ಘಾಟನೆಗೆ ಅವಕಾಶ ನೀಡುವುದಾಗಿ ಶಾಸಕರು ಎಚ್ಚರಿಕೆ ನೀಡಿದರು. ಜನರ ಬಗ್ಗೆ ಶಾಸಕರು ಹೊಂದಿರುವ ಕಾಳಜಿ ಈ ಮಾತಿನಲ್ಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.