ಹೊಳಲ್ಕೆರೆ: ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
1968 ರಲ್ಲಿ ಆಶ್ರಮದ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ವೆಂಕಟೇಶ ಮೂರ್ತಿ ಅವರು ಐಟಿಐ ಮಾಡಿ ಮೆಕಾನಿಕಲ್ ಎಂಜಿನಿಯರಿಂಗ್ ಶಿಕ್ಷಕರಾಗಿದ್ದರೂ, ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಎಚ್‌ಎಸ್‌ವಿ ಮುಂದೆ ದೊಡ್ಡ ಕವಿಯಾಗಲು ಇದೇ ಮಲ್ಲಾಡಿಹಳ್ಳಿ ಮುಖ್ಯ ಭೂಮಿಕೆಯಾಗಿತ್ತು. ಆಶ್ರಮದಲ್ಲಿದ್ದ ರಾಮಚಂದ್ರ ಮೂರ್ತಿ ಎಂಬುವರು ವೆಂಕಟೇಶ ಮೂರ್ತಿ ಅವರ ಸಾಹಿತ್ಯಾಸಕ್ತಿ ಕಂಡು ಆಶ್ರಮದ ಶಾಲಾ, ಕಾಲೇಜುಗಳಲ್ಲಿ ಕನ್ನಡ ಪಾಠ ಮಾಡಲು ಅವಕಾಶ ಮಾಡಿಕೊಟ್ಟರು. ಆ ನಂತರವೇ ಎಚ್ಎಸ್‌ವಿ ಬಿ.ಎ. ಪದವಿ ಪಡೆದು ನಂತರ ಎಂ.ಎ. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದರು.
ಎಚ್.ಎಸ್.ವೆಂಕಟೇಶ ಮೂರ್ತಿ ಅವರಿಗೂ ಮಲ್ಲಾಡಿಹಳ್ಳಿ ಆಶ್ರಮಕ್ಕೂ ಅವಿನಾಭಾವ ಸಂಬಂಧ ಇತ್ತು. ಅವರು ಆಶ್ರಮ ಬಿಟ್ಟು ಬೇರೆ ಕಡೆ ಹೋದ ಮೇಲೂ ಮಲ್ಲಾಡಿಹಳ್ಳಿಗೆ ಬರುತ್ತಿದ್ದರು. ಪ್ರತೀ ವರ್ಷ ರಾಘವೇಂದ್ರ ಸ್ವಾಮೀಜಿ ಪುಣ್ಯಾರಾಧನೆ ಸಂದರ್ಭದಲ್ಲಿ ಆಶ್ರಮದಲ್ಲಿ ನಡೆಯುತ್ತಿದ್ದ 5 ದಿನಗಳ ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವದಲ್ಲಿ ಭಾಗವಹಿಸುತ್ತಿದ್ದರು.
ಆಶ್ರಮದಲ್ಲಿದ್ದು ಕವಿಯಾಗಿ ಹೊರಹೊಮ್ಮಿದ ವೆಂಕಟೇಶ ಮೂರ್ತಿ ರಾಘವೇಂದ್ರ ಸ್ವಾಮೀಜಿ ಅವರ ಒಡನಾಡಿಯಾಗಿದ್ದರು. ರಾಘವೇಂದ್ರ ಸ್ವಾಮೀಜಿ ತಾವು ಬರೆದ ಸಾಹಿತ್ಯವನ್ನು ಎಚ್ಎಸ್‌ವಿ ಅವರಿಗೆ ತೋರಿಸಿ ಅದರ ಬಗ್ಗೆ ಚರ್ಚಿಸುತ್ತಿದ್ದರು. ಎಚ್ಎಸ್‌ವಿ ಕೂಡ ರಾಘವೇಂದ್ರ ಸ್ವಾಮೀಜಿ ಅವರ ಬಗ್ಗೆ ಕವನವೊಂದನ್ನು ಬರೆದಿದ್ದರು.
‘ನಾಟಕೋತ್ಸದಲ್ಲಿ ಪ್ರತೀ ವರ್ಷ ಎಚ್‌ಎಸ್‌ವಿ ಅವರು ರಚಿಸಿದ ನಾಟಕವೊಂದರ ಪ್ರದರ್ಶನ ಇರುತ್ತಿತ್ತು. ಮೊದಲಿಗೆ ಕವಿತೆಯಲ್ಲಿ ಆಸಕ್ತಿ ಹೊಂದಿದ್ದ ನನ್ನನ್ನು ಕತೆಗಾರನ್ನಾಗಿ ಹೊರ ಹೊಮ್ಮಿಸಿದವರು ಎಚ್ಎಸ್‌ವಿ. ಗದ್ಯದ ತುಣುಕೊಂದನ್ನು ಅವರಿಗೆ ತೋರಿಸಿದಾಗ ‘ನೀನು ಗದ್ಯದಲ್ಲಿ ಹೆಚ್ಚು ಹಿಡಿತ ಹೊಂದಿದ್ದೀಯ, ಇದನ್ನೇ ಮುಂದುವರೆಸು’ ಎಂದು ಪ್ರೇರೇಪಿಸಿದ್ದರಿಂದ ನಾನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆಯುವಂತಹ ಕತೆಗಾರನಾದೆ’ ಎಂದು ಕತೆಗಾರ ರಾಘವೇಂದ್ರ ಪಾಟೀಲ ಸ್ಮರಿಸುತ್ತಾರೆ.
‘ಎಚ್ಎಸ್‌ವಿ ಅವರು ಪಟ್ಟಣದ ಎಂಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಪಟ್ಟಣದ ಹೊಂಡದ ಸಮೀಪ ಮನೆ ಮಾಡಿಕೊಂಡಿದ್ದರು. ಅವರ ಪತ್ನಿ ರಾಜೇಶ್ವರಿ ನಮ್ಮ ತಾಲ್ಲೂಕಿನ ರಾಮಗಿರಿಯವರು’ ಎಂದು ಸಂಬಂಧಿ ಕೇಶವಮೂರ್ತಿ ಹೇಳಿದರು.
ಎಚ್ಎಸ್‌ವಿ ಅವರು ಆಶ್ರಮದಲ್ಲಿ ಸಂಚರಿಸಿದ ಹೆಜ್ಜೆ ಗುರುತುಗಳು ಇನ್ನೂ ಹಾಗೇ ಇವೆ. ಕನ್ನಡ ಸಾಹಿತ್ಯ ಲೋಕ ಅದ್ಭುತ ಪ್ರತಿಭೆಯೊಂದನ್ನು ಕಳೆದುಕೊಂಡಿದೆ. ಆಶ್ರಮದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗೆ ಮಾರ್ಗದರ್ಶಕರೂ, ಹಿತೈಷಿಗಳೂ ಆಗಿದ್ದ ಹಿರಿಯ ಜೀವವೊಂದು ಕಣ್ಮರೆಯಾಗುತ್ತಿರುವುದು ದುಃಖ ತಂದಿದೆ ಎಂದು ಗ್ರಾಮದ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಲ್ಲಾಡಿಹಳ್ಳಿ ಆಶ್ರಮವು ರಂಗಭೂಮಿಯಲ್ಲಿ ಗುರುತಿಸಿಕೊಳ್ಳಲು ಎಚ್.ಎಸ್.ವೆಂಟಕೇಶ ಮೂರ್ತಿ ಅವರ ಕೊಡುಗೆಯೂ ಇದೆ. ಅವರು ರಾಘವೇಂದ್ರ ಸ್ವಾಮೀಜಿಯೊಂದಿಗೆ ಸೇರಿ ರಂಗಭೂಮಿ ಚಟುವಟಿಕೆಗೆ ಇಂಬು ನೀಡಿದ್ದರುರಾಘವೇಂದ್ರ ಪಾಟೀಲ ಮಲ್ಲಾಡಿಹಳ್ಳಿ ಆಶ್ರಮದ ಉಪಾಧ್ಯಕ್ಷ
ಎಚ್ಎಸ್‌ವಿಗೆ ಮಂಡಕ್ಕಿ ಮಿರ್ಚಿ ಇಷ್ಟ
‘ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಹೊದಿಗೆರೆಗೆ ಬಂದಾಗಲೆಲ್ಲಾ ಹೊಳಲ್ಕೆರೆಯ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯಲ್ಲಿ ಮಾಡಿದ ಮಂಡಕ್ಕಿ ಮಿರ್ಚಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಅವರಿಗೆ ಜೋಳದ ರೊಟ್ಟಿ ಎಣ್ಣೆಗಾಯಿ ಎಂದರೆ ಇಷ್ಟ’ ಎಂದು ಕವಿ ಚಂದ್ರಶೇಖರ ತಾಳ್ಯ ಸ್ಮರಿಸಿದರು. ‘ನನಗೂ ಎಚ್ಎಸ್‌ವಿ ಅವರಿಗೂ 25 30 ವರ್ಷಗಳಿಂದ ನಂಟು. ನನ್ನ ಕಾವ್ಯಗಳಿಗೆ ಅವರು ಮುನ್ನುಡಿ ಹಿನ್ನುಡಿ ಬರೆದು ಪ್ತೋತ್ಸಾಹಿಸಿದ್ದಾರೆ. ಸದಾ ಹಸನ್ಮುಖಿ ಆಗಿರುತ್ತಿದ್ದ ಅವರು ಯಾರನ್ನೂ ದ್ವೇಷಿಸುತ್ತಿರಲಿಲ್ಲ. ಕಳೆದ ವರ್ಷ ಹೊಳಲ್ಕೆರೆ ಮಾರ್ಗದಲ್ಲಿ ಹೋಗುವಾಗ ನನಗೆ ಅವರ ಕೊನೆಯ ಮಹಾಕಾವ್ಯ ‘ಬುದ್ಧ ಚರಣ’ ನೀಡಿ ಅಭಿಪ್ರಾಯ ತಿಳಿಸುವಂತೆ ಹೇಳಿದ್ದರು. ಹದಿನೈದು ದಿನಗಳ ಹಿಂದೆ ನಾನು ಬೆಂಗಳೂರಿನಲ್ಲಿ ಅವರ ಮನೆಗೆ ಹೋಗಿದ್ದಾಗ ಅವರ ದೇಹ ಕೃಶವಾಗಿತ್ತು. ಆದರೂ ಆತ್ಮೀಯತೆಯಿಂದ ಕೈ ಹಿಡಿದು ಕೂರಿಸಿಕೊಂಡಿದ್ದರು’ ಎಂದು ತಾಳ್ಯ ನೆನಪು ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.