ಶ್ರೀರಾಂಪುರ: ಸಮೀಪದ ಬೆಲಗೂರು, ಸೋಮಸಂದ್ರ, ಶ್ರೀರಾಂಪುರ ಸೇರಿದಂತೆ ವಿವಿಧೆಡೆ ಶುಕ್ರವಾರ ಹನುಮ ಜಯಂತಿ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನೆರವೇರಿತು. ಸಾವಿರಾರು ಭಕ್ತರು ಆಂಜನೇಯ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಆಂಜನೇಯ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಅಭೀಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ವಸಂತ ಸೇವೆಯನ್ನು ನೆಡೆಸಲಾಯಿತು.
ಬೆಲಗೂರು: ಇಲ್ಲಿನ ಅವಧೂತ ಸದ್ಗುರು ಬಿಂಧು ಮಾಧವ ಶರ್ಮಾ ಅವರ ಆರಾಧ್ಯ ದೈವ ವೀರ ಪ್ರತಾಪ ಆಂಜನೇಯ ದೇಗುಲದಲ್ಲಿ ಹನುಮಜಯಂತಿ ಅಂಗವಾಗಿ ವಿಶೇಷ ಹೋಮ ಹವನ ಸೇರಿದಂತೆ ಅಲಂಕಾರ ಮಾಡಲಾಗಿತ್ತು. ಈ ಸಂಬಂಧ ಗುರುವಾರ ರಾತ್ರಿ ಲಕ್ಷ್ಮೀ ಕಲ್ಯಾಣೋತ್ಸವ ಹಾಗೂ ಸೀತಾ ಕಲ್ಯಾಣೋತ್ಸವ ನಡೆಸಲಾಯಿತು.
ಶುಕ್ರವಾರ 64 ಅಡಿ ಎತ್ತರದ 2 ಬೃಹತ್ ರಥಗಳಲ್ಲಿ ಲಕ್ಷ್ಮೀ ನಾರಾಯಣ ಹಾಗೂ ವೀರ ಪ್ರತಾಪ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ಆಗಮಿಸಿದ ಸಾವಿರಾರು ಭಕ್ತರು ರಥವನ್ನು ಎಳೆದು, ರಥಕ್ಕೆ ಬಾಳೆಹಣ್ಣು ತೂರುವ ಮೂಲಕ ಮೂಲಕ ಭಕ್ತಿ ಸಮರ್ಪಿಸಿದರು.
ಸೋಮಸಂದ್ರ: ಇಲ್ಲಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಶುಕ್ರವಾರ ಹನುಮ ಜಯಂತಿ ಅಂಗವಾಗಿ ಗರ್ಭಗುಡಿಯಲ್ಲಿರುವ ಬೃಹದಾಕಾರದ ಹನುಮನ ಮೂರ್ತಿಗೆ ಬೆಳ್ಳಿ ಕವಚ ತೊಡಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಕೈನಡು ಗ್ರಾಮ ದೇವತೆ ಇಂದ್ರಾಣಿ ಕರಿಯಮ್ಮ ದೇವಿಯನ್ನು ಕರೆತರಲಾಗಿತ್ತು.
ಆಲಂಕೃತ ರಥದಲ್ಲಿ ಆಂಜನೇಯ ಸ್ವಾಮಿ ಹಾಗೂ ಇಂದ್ರಾಣಿ ಕರಿಯಮ್ಮ ದೇವಿಯನ್ನು ಪ್ರತಿಷ್ಠಾಪಿಸಿ, ಭಕ್ತರು ಎಳೆದರು. ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಶ್ರೀರಾಂಪುರದ ಕೋಟೆ ಆಂಜನೇಯ ಸ್ವಾಮಿ ರಥೋತ್ಸವವೂ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.