ಮಿಥುನ್
ಚಿತ್ರದುರ್ಗ: ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿ ಎನ್. ಮಿಥುನ್ (21) ಶುಕ್ರವಾರ ಜನ್ಮದಿನ ಆಚರಿಸಿಕೊಂಡಿದ್ದರು.
ಮಿಥುನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಹುಟ್ಟೂರು, ಹೊಸದುರ್ಗ ತಾಲ್ಲೂಕು ಗವಿರಂಗಾಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ ವಿಜಯ ನಾಗರಾಜ್ ಗವಿರಂಗನಾಥ ಸ್ವಾಮಿ ಬೆಟ್ಟದ ಗವಿರಂಗನಾಥ ಸ್ವಾಮಿ ದೇವಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕುಸುಮಾ ಗೃಹಿಣಿ. ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬ ಮಗಳು ಎಂಜಿನಿಯರಿಂಗ್ ಮಾಡಿದ್ದು, ವಿವಾಹವಾಗಿದೆ. ಇನ್ನೊಬ್ಬರು ಹಾಸನದಲ್ಲಿ ಫುಡ್ ಟೆಕ್ನಾಲಜಿ ಓದಿದ್ದಾರೆ. ಒಬ್ಬನೇ ಮಗ ಮಿಥುನ್ ಎಂಜಿನಿಯರಿಂಗ್ ಓದುತ್ತಿದ್ದರು.
'ಶ್ರೀರಾಂಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದ್ದ ನನ್ನ ಮಗ 472 ಅಂಕ ಗಳಿಸಿದ್ದರು. ಹಂದನಕೆರೆಯಲ್ಲಿ ಪಿಯುಸಿ ಓದಿ 427 ಅಂಕ ಗಳಿಸಿದ್ದರು. ಹಾಸನದ ಮೊಸಳೆ ಹೊಸಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದರು.
'ಇನ್ನೊಂದು ಸೆಮಿಸ್ಟರ್ ಆಗಿದ್ದರೆ ಮಗನ ಎಂಜಿನಿಯರಿಂಗ್ ಮುಗಿಯುತ್ತಿತ್ತು. ನಂತರ ಕೆ.ಇ.ಬಿಯಲ್ಲಿ ಉದ್ಯೋಗ ಮಾಡಬೇಕೆಂಬ ಕನಸಿತ್ತು. ಪ್ರತಿ ದಿನ ರಾತ್ರಿ 8 ಗಂಟೆಗೆ ಫೋನ್ ಮಾಡಿ, ಎಲ್ಲರನ್ನೂ ಮಾತನಾಡಿಸುತ್ತಿದ್ದ. ಲ್ಯಾಪ್ ಟಾಪ್ ಕೊಡಿಸು ಎಂದಿದ್ದ, ಸ್ನೇಹಿತರ ಬಳಿ ವಿಚಾರಿಸಿ ಲ್ಯಾಪ್ ಟಾಪ್ ಖರೀದಿಗೆ ಮುಂದಾಗಿದ್ದೆ. ಶುಕ್ರವಾರ ಮಾತ್ರ ರಾತ್ರಿ ಎರಡು ಬಾರಿ ಫೋನ್ ಮಾಡಿ, ಮಾತಾಡಿದ್ದ' ಎಂದು ವಿಜಯ ನಾಗರಾಜ್ ಕಣ್ಣೀರಾದರು.
ಮೃತದೇಹವನ್ನು ಶನಿವಾರ ಬೆಳಿಗ್ಗೆ ತರಲಾಯಿತು. ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ ತಾಯಿಯ ನೋವು ಇಡೀ ಗ್ರಾಮ ಆವರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.