ಚಿತ್ರದುರ್ಗ ನಗರದ ಹೊರವಲಯದ ಮಠದ ಕುರುಬರಹಟ್ಟಿಯ ಅಂಗನವಾಡಿಯಲ್ಲಿ ಮಕ್ಕಳ ಲಸಿಕೆಯ ಬಗ್ಗೆ ಗುರುವಾರ ಜಾಗೃತಿ ಮೂಡಿಸಲಾಯಿತು
ಚಿತ್ರದುರ್ಗ: ಜೀವಕ್ಕೆ ಮಾರಕವಾಗಿರುವ ರೋಗಳಿಂದ ಮಕ್ಕಳನ್ನು ರಕ್ಷಿಸಲು ತಪ್ಪದೇ ಎಲ್ಲ ಲಸಿಕೆಗಳನ್ನು ಹಾಕಿಸಬೇಕು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.
ನಗರದ ಹೊರವಲಯದ ಮಠದ ಕುರುಬರಹಟ್ಟಿಯ ಅಂಗನವಾಡಿ ‘ಎ’ ಕೇಂದ್ರದಲ್ಲಿ ಗುರುವಾರ ನಡೆದ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೋಷಕರು ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಕೊಡಿಸಬೇಕು. 12 ಮಾರಕ ರೋಗಗಳಿಂದ ಮಕ್ಕಳಿಗೆ ರಕ್ಷಣೆ ನೀಡಬೇಕು. ಲಸಿಕೆಗಳು ಎದೆಹಾಲಿನಷ್ಟೇ ಮಹತ್ವವುಳ್ಳದ್ದಾಗಿವೆ. ಬಿಟ್ಟು ಹೋಗಿರುವ ಲಸಿಕಾ ದಿನಚರಿಯನ್ನು ಸರಿಪಡಿಸಿಕೊಳ್ಳಬೇಕು. ಮಹಿಳೆಯರು ಕುಟುಂಬ ಯೋಜನೆ ಅನುಸರಿಸಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ‘ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಸಮತೋಲಿತ ಆಹಾರ ಅತಿ ಮುಖ್ಯ. ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಸಾಧಾರಣ ಅಪೌಷ್ಟಿಕತೆ, ತೀವ್ರ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ ಗುರುತಿಸಬೇಕು. ಮಕ್ಕಳ ಅಗತ್ಯ ಆಹಾರದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ವಾರಕ್ಕೆ ಎರಡು ಬಾರಿ ಕಬ್ಬಿಣಾಂಶದ ಔಷಧಿ ನೀಡುವ ಅಗತ್ಯವಿದೆ. ಇದರಿಂದ ಮಕ್ಕಳನ್ನು ರಕ್ತಹೀನತೆಯಿಂದ ಕಾಪಾಡಬಹುದಾಗಿದೆ’ ಎಂದು ಹೇಳಿದರು.
ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಆಶಾ ಕಾರ್ಯಕರ್ತೆಯರಾದ ನಾಗಮ್ಮ, ಶಿವಮಾಲಾ, ಅಂಗನವಾಡಿ ಕಾರ್ಯಕರ್ತೆ ಬಾನು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.