
ಚಿಕ್ಕಜಾಜೂರು: ಶಾಸಕ ಎಂ. ಚಂದ್ರಪ್ಪ ಅವರ ಜನಪರ ಕಾಳಜಿಯ ಕೆಲಸಗಳಿಗೆ ಸರ್ಕಾರ ಹಾಗೂ ವೈಯಕ್ತಿಕ ಸಹಕಾರ ಸದಾ ಇರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸಮೀಪದ ಗುಂಜಿಗನೂರು ಗೇಟ್ ಬಳಿ 30 ಹಾಸಿಗೆ ಸಾಮರ್ಥ್ಯದ ಸುಮಾರು ₹16 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ವೈದ್ಯರ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಗಂಭೀರ ಕಾಯಿಲೆಯ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಲಕ್ಷ, ಲಕ್ಷ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ಇಂತಹ ಸರ್ಕಾರಿ ಆರೋಗ್ಯ ಸೇವೆ ಕಲ್ಪಿಸಿದರೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಾದ ಸಿಬ್ಬಂದಿ ಹಾಗೂ ವಿವಿಧ ತಜ್ಞ ವೈದ್ಯರನ್ನು ನಿಯೋಜಿಸುವ ಚಿಂತನೆ ಇದೆ. ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎಂದರು.
ವಸತಿ ಗೃಹಕ್ಕೆ ಸಮ್ಮತಿ: ತಾಲ್ಲೂಕಿನ ಎಚ್.ಡಿ. ಪುರದಲ್ಲಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣಕ್ಕೆ ಚಂದ್ರಪ್ಪ ಅವರು ಬೇಡಿಕೆ ಇಟ್ಟಿದ್ದು, ಅದಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಚಿಕ್ಕಜಾಜೂರಿನ ಜನತಾ ಕಾಲೊನಿಯಲ್ಲಿ ನಿರ್ಮಿಸಿರುವ ಮೂರು ಸುಸಜ್ಜಿತ ಕೊಠಡಿಗಳ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸೋಮವಾರ ಉದ್ಘಾಟಿಸಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಕೆ.ಎಂ. ಶಿವಕುಮಾರ್, ಬಿ. ಪುಟ್ಟಸ್ವಾಮಿ, ಡಿ.ಸಿ. ಮೋಹನ್, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್, ಉಪಾಧ್ಯಕ್ಷೆ ಶಶಿಕಲಾ, ಗುಂಜಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪಮ್ಮ ಟಿ. ಶಿವಮೂರ್ತಿ, ಉಪಾಧ್ಯಕ್ಷ ಗುರುಮೂರ್ತಿ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಟಿ. ಹನುಮಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಎಸ್. ಶಿವಪ್ರಕಾಶ್, ಆಸ್ಪತ್ರೆಯ ವೈದ್ಯ ಪ್ರದೀಪ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಶ್ರೀನಿವಾಸ್, ಜನತಾ ಕಾಲೊನಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪಿ. ಗಂಗಮ್ಮ, ಪಿಡಿಒಗಳಾದ ಜಯಪ್ಪ, ಎಚ್.ಆರ್. ಪ್ರದೀಪ್, ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ, ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿ ನಿತ್ಯ 300-400 ಹೊರ ರೋಗಿಗಳು ಬರುತ್ತಿದ್ದು ಹೈಟೆಕ್ ಆಸ್ಪತ್ರೆಗೆ ₹14 ಕೋಟಿ ಹಾಗೂ ಸಿಬ್ಬಂದಿ ವಸತಿ ಗೃಹಗಳಿಗೆ ₹2 ಕೋಟಿ ವೆಚ್ಚ ಮಾಡಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು. ಇದೇ ರೀತಿ ತಾಲ್ಲೂಕು ಕೇಂದ್ರದಲ್ಲಿ ₹20 ಕೋಟಿ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಹಾಗೂ ₹13 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ತಾಲ್ಲೂಕಿನ ರಾಮಗಿರಿಯಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ₹2 ಕೋಟಿ ವೆಚ್ಚದಲ್ಲಿ ವಸತಿ ಗೃಹ ನಿರ್ಮಿಸಲಾಗುತ್ತಿದೆ. ಎಚ್.ಡಿ. ಪುರದಲ್ಲಿ ಈಗಾಗಲೇ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಆಸ್ಪತ್ರೆ ಸಿಬ್ಬಂದಿಗೆ ವಸತಿ ಗೃಹದ ನಿರ್ಮಾಣಕ್ಕೆ ಆರ್ಥಿಕ ನೆರವು ಕೊಡಿಸಿ ಎಂದು ಚಂದ್ರಪ್ಪ ಅವರು ಸಚಿವರಲ್ಲಿ ಮನವಿ ಮಾಡಿದರು.
ಈಗಾಗಲೇ ರೈತರ ಅನುಕೂಲಕ್ಕಾಗಿ ತಾಲ್ಲೂಕಿನ 17 ಕಡೆಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗ ರೈತರ ಪಂಪ್‌ಸೆಟ್‌ಗಳಿಗೆ ಐದರಿಂದ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಕೋಟೆಹಾಳ್ ಬಳಿ 13 ಎಕರೆ ಪ್ರದೇಶದಲ್ಲಿ ₹500 ಕೋಟಿ ವೆಚ್ಚದಲ್ಲಿ ದೊಡ್ಡ ವಿದ್ಯುತ್ ವಿತರಣಾ ಘಟಕ ನಿರ್ಮಿಸಲಾಗುವುದು. ಇದರಿಂದ ಈ ಭಾಗದ ರೈತರಿಗೆ 10 ಗಂಟೆ ವಿದ್ಯುತ್ ಪೂರೈಸಲು ಅನುಕೂಲವಾಗಲಿದೆ ಎಂದು ಶಾಸಕ ಚಂದ್ರಪ್ಪ ತಿಳಿಸಿದರು. ಜ.26ರ ವೇಳೆಗೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಭದ್ರಾ ನೀರು ಹರಿಸಲಾಗುವುದು. 300ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಹೊಳಲ್ಕೆರೆಯಲ್ಲಿ ಹೈಟೆಕ್ ಶಾಲೆ ನಿರ್ಮಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಬಸ್ ಸೌಲಭ್ಯ ನೀಡಿರುವುದರಿಂದ ಶಾಲೆಯಲ್ಲಿ 1500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.