ADVERTISEMENT

ಹೊಸದುರ್ಗ: ದುಡಿಮೆಯಿಲ್ಲದೆ ಜೀವನ ಸಾಕಾಗಿದೆ

ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಳಲು.. ಜಾನುವಾರುಗಳದ್ದೇ ಚಿಂತೆ...

ಶ್ವೇತಾ ಜಿ.
Published 12 ಸೆಪ್ಟೆಂಬರ್ 2022, 5:49 IST
Last Updated 12 ಸೆಪ್ಟೆಂಬರ್ 2022, 5:49 IST
ಹೊಸದುರ್ಗದ ಕಾಗೋಡು ತಿಮ್ಮಪ್ಪ ನಗರದ ಕಾಳಜಿ ಕೇಂದ್ರದಲ್ಲಿ ಆಹಾರ ಸೇವಿಸುತ್ತಿರುವ ಜನ.
ಹೊಸದುರ್ಗದ ಕಾಗೋಡು ತಿಮ್ಮಪ್ಪ ನಗರದ ಕಾಳಜಿ ಕೇಂದ್ರದಲ್ಲಿ ಆಹಾರ ಸೇವಿಸುತ್ತಿರುವ ಜನ.   

ಹೊಸದುರ್ಗ: ‘ಕಾಳಜಿ ಕೇಂದ್ರದಲ್ಲಿ ನಿತ್ಯ ಊಟ ಮಾಡೋದು, ಮಲಗೋದು, ಊರವರ ಜೊತೆ ಹರಟುತ್ತಾ ಕೂರೋದು. ಎಲ್ಲೂ ಹೋಗಂಗಿಲ್ಲ, ಬರಂಗಿಲ್ಲ. ದುಡಿಮೆಯಿಲ್ಲ, ದನಕರುಗಳಿಗೆ ಮೇವಿಲ್ಲ. ಯಪ್ಪಾ ಈ ಜೀವನ ಸಾಕುಸಾಕಾಗಿದೆ...’

ಇದು ತಾಲ್ಲೂಕಿನ ಕಾಗೋಡು ತಿಮ್ಮಪ್ಪ ನಗರ (ಕೆ.ಟಿ. ನಗರ), ಪೂಜಾರಹಟ್ಟಿಗಳಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರ ಅಳಲು.

‘ಕಾಳಜಿ ಕೇಂದ್ರದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಉತ್ತಮ ಮತ್ತು ರುಚಿಯಾದ ಊಟ ಸಿಗುತ್ತಿದೆ. ಮೂಲ ಸೌಕರ್ಯಗಳನ್ನೂ ಕಲ್ಪಿಸಲಾಗಿದೆ. ಆದರೆ, ಎಲ್ಲಿಯೂ ಓಡಾಡುವಂತಿಲ್ಲ. ದುಡಿಮೆ ಬಿಟ್ಟು ಇಲ್ಲಿ ಕೂರುವಂತಾಗಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ಸದ್ಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಊಟ ಸಿಗುತ್ತಿದೆ. ಜಮೀನುಗಳು ಮುಳುಗಡೆಯಾಗಿದ್ದು, ಮುಂದೆ ಜೀವನಕ್ಕೆ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ’ ಎಂದು ಕೆ.ಟಿ. ನಗರ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮದ ಸುತ್ತಲೂ ನೀರು ಆವರಿಸಿದೆ. ಬಹುತೇಕರು ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಬಿಸಿನೀರು ಕುಡಿಯೋದು, ಮಾತ್ರೆ ನುಂಗಿ ಮಲಗೋದು ಅಷ್ಟೇ ಆಗಿದೆ’ ಎನ್ನುತ್ತಾರೆ ಚಂದ್ರಮ್ಮ.

‘ನಾಲ್ಕು ವರ್ಷಗಳ ಹಿಂದೆಯೂ ಗ್ರಾಮ ಜಲಾವೃತವಾಗಿತ್ತು. ಈಗ ಮತ್ತೆ ಸಮಸ್ಯೆಯಾಗಿದೆ. ಪ್ರತಿ ವರ್ಷ ಹೀಗೆಯೇ ಆಗುತ್ತಿದ್ದರೆ ನಮ್ಮ ಬದುಕು ಕಷ್ಟ. ಮಳೆ ನೀರು ನಿಂತು ಮನೆಗಳು ಶಿಥಿಲಗೊಂಡಿವೆ. ಯಾವ ಕ್ಷಣದಲ್ಲಿ ಮನೆಯ ಗೋಡೆ ಬೀಳುತ್ತದೋ ಎಂಬ ಆತಂಕವಿದೆ. ಬೇರೆ ಕಡೆ ಜಾಗ ಕಲ್ಪಿಸುವುದಾಗಿ ತಹಶೀಲ್ದಾರ್ ಹೇಳಿದ್ದಾರೆ. ಒಳ್ಳೆಯ ಸ್ಥಳ ಕಲ್ಪಿಸಿದರೆ ಸಾಕು‌’ ಎನ್ನುತ್ತಾರೆ ಕರಿಯಪ್ಪ.

‘ನಾವೇನೋ ಕಾಳಜಿ ಕೇಂದ್ರದಲ್ಲಿದ್ದು ಜೀವ ಉಳಿಸಿಕೊಳ್ಳುತ್ತಿದ್ದೇವೆ. ಆದರೆ, ದನಕರುಗಳ ಪರಿಸ್ಥಿತಿ ಹೇಳತೀರದು. ತಿನ್ನಲು ಮೇವಿಲ್ಲ. ಓಡಾಡಲು ಆಗುತ್ತಿಲ್ಲ. ಇದ್ದಲ್ಲೇ ಇರಬೇಕು. ಸೊಳ್ಳೆಗಳ ಹಾವಳಿಯೂ ಹೆಚ್ಚಿದೆ. ಮೂಕ ಪ್ರಾಣಿಗಳ ವೇದನೆ ಕಂಡು ಹೊಟ್ಟೆ ಉರಿಯುತ್ತದೆ. ಯಾರಿಗಾದರೂ ಕೊಡೋಣವೆಂದರೆ ಯಾರೂ ಮುಂದೆ ಬರುತ್ತಿಲ್ಲ. ದಿನಕ್ಕೆ ಒಂದು ಬಾರಿಯಾದರೂ ಜಮೀನಿನ ಕಡೆ ಹೋಗದೆ ಬದುಕುವುದು ಹೇಗೆ? ಬದುಕು ಸ್ತಬ್ಧವಾಗಿದೆ’ ಎನ್ನುತ್ತಾರೆ ಪೂಜಾರಹಟ್ಟಿ ಗ್ರಾಮದ ಮಲ್ಲೇಶಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.