
ಪ್ರಜಾವಾಣಿ ವಾರ್ತೆ
ಹಿರಿಯೂರು: ‘ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನಗಳನ್ನು ಓಡಿಸುವುದರಿಂದ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತಾಗುತ್ತದೆ’ ಎಂದು ನಗರ ಪಿಎಸ್ಐ ಲಕ್ಷ್ಮಿ ನಾರಾಯಣ್ ಎಚ್ಚರಿಸಿದರು.
ನಗರದ ಪ್ರಧಾನ ರಸ್ತೆಯಲ್ಲಿ ಭಾನುವಾರ ಹೆಲ್ಮೆಟ್ ಧರಿಸದೆ ವಾಹನ ಓಡಿಸುತ್ತಿದ್ದವರನ್ನು ತಡೆದು, ಜಾಗೃತಿ ಮೂಡಿಸಿದರು.
‘ನಿಮ್ಮ ಪ್ರಾಣ ನಿಮ್ಮ ಕೈಯಲ್ಲಿ ಎಂಬುದನ್ನು ಸವಾರರು ನೆನಪಿಡಬೇಕು. ಹೆಲ್ಮೆಟ್ ಧರಿಸದವರು ಪೊಲೀಸರನ್ನು ಕಂಡಾಕ್ಷಣ ದಂಡದಿಂದ ತಪ್ಪಿಸಿಕೊಳ್ಳಲು ಪರ್ಯಾಯ ದಾರಿಯಲ್ಲಿ ವೇಗವಾಗಿ ತೆರಳಿ ಅಪಘಾತಕ್ಕೆ ಈಡಾಗಿರುವುದುಂಟು. ₹500 ರಿಂದ ₹1,000 ದಂಡ ಹಾಕಿಸಿಕೊಳ್ಳುವ ಬದಲು ಐಎಸ್‌ಐ ಮಾನ್ಯತೆಯ ಹೆಲ್ಮೆಟ್ ಧರಿಸಿದಲ್ಲಿ ಧೈರ್ಯವಾಗಿ ವಾಹನ ಚಲಾಯಿಸಬಹುದು’ ಎಂದು ಹೇಳಿದರು.
ಪಿಎಸ್ಐ ಶಶಿಕಲಾ, ಎಎಸ್ಐ ರೇಖಾ, ಹೆಡ್ ಕಾನ್‌ಸ್ಟೆಬಲ್ ಸುರೇಶನಾಯಕ್, ನಂಜೇಗೌಡ, ಕಾನ್‌ಸ್ಟೆಬಲ್ ರಾಘವೇಂದ್ರ, ಸುನಿಲ್, ನಿಂಗಪ್ಪ ಉಪಸ್ಥಿತರಿದ್ದರು.