
ಚಳ್ಳಕೆರೆ: ಸಮೀಪದ ತುರುವನೂರು ಹೋಬಳಿ ಕಡಬನಕಟ್ಟೆ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಹಳೆ ಕಟ್ಟಡ ನೆಲಸಮಗೊಳಿಸಿ ಡಿಎಂಎಫ್ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಲಾಗಿದ್ದು ಉದ್ಘಾಟನೆಗೆ ಸಜ್ಜಾಗಿದೆ.
ಒಟ್ಟು ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಐವರು ಶಿಕ್ಷಕರಿದ್ದು, 137 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಹೈಟೆಕ್ ಕಟ್ಟಡದ ನೆಲಮಹಡಿಯಲ್ಲಿ 6 ಕೊಠಡಿಗಳು ಮತ್ತು ಮಹಡಿಯಲ್ಲಿ 2 ಕೊಠಡಿಗಳಿದ್ದು, ಒಟ್ಟು 8 ಕೊಠಡಿ ನಿರ್ಮಿಸಲಾಗಿದೆ. 1 ಕೊಠಡಿ ಗ್ರಂಥಾಲಯ ಮತ್ತು ವಿಜ್ಞಾನ ಪ್ರಯೋಗಾಲಯಕ್ಕೆ ಮೀಸರಿಸಲಾಗಿದೆ.
ಪ್ರತಿ ಕೊಠಡಿಗೆ ಗ್ರಾನೈಟ್ ಮತ್ತು ಕಿಟಕಿ, ಬಾಗಿಲಿಗೆ ಗುಣಮಟ್ಟದ ಮರ ಬಳಸಿದ್ದಾರೆ. ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಅತ್ಯಾಧುನಿಕ ವಿಜ್ಞಾನ– ತಂತ್ರಜ್ಞಾನದ ಉಪಕರಣ, 5 ಕಂಪ್ಯೂಟರ್, ಲ್ಯಾಪ್‍ಟಾಪ್, ಪ್ರತಿ ತರಗತಿಗೆ ಸ್ಮಾರ್ಟ್ ಕ್ಲಾಸ್ ನಿರ್ಮಾಣದ ಮೂಲಕ ಪದವಿ ಕಾಲೇಜು ಮಾದರಿಯಲ್ಲಿ ಹುಟ್ಟೂರಿನಲ್ಲಿ ಹೈಟೆಕ್ ಶಾಲೆ ಕಟ್ಟಡ ನಿರ್ಮಿಸಿರುವುದು ಶಿಕ್ಷಣ ಕ್ಷೇತ್ರದ ಬಗ್ಗೆ ಶಾಸಕರಿಗೆ ಇರುವ ಅಭಿಮಾನ, ಪ್ರೀತಿ ಮತ್ತು ಕಾಳಜಿ ತೋರಿಸುತ್ತಿದೆ.
‘ನನ್ನನ್ನು ರೂಪಿಸಿದ ಶಾಲೆ ಮಾದರಿಯಾಗಬೇಕು ಮತ್ತು ನನ್ನ ಕ್ಷೇತ್ರದಲ್ಲಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ನೂರಾರು ಬಡ ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಹೈಟೆಕ್ ಕಟ್ಟಡ ನಿರ್ಮಿಸಲಾಗಿದೆ. ಇದು ನನ್ನ ಕನಸಿನ ಶಾಲೆ. ಮುಖ್ಯಮಂತ್ರಿಯಿಂದಲೇ ಉದ್ಘಾಟನೆ ಮಾಡಿಸಬೇಕು ಎಂಬ ಹಂಬಲವಿದೆ’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಬೇಕಿದೆ ಅಗತ್ಯ ಸೌಲಭ್ಯ: ‘ಬೋಧನೆಗೆ ಇನ್ನೂ ಇಬ್ಬರು ಶಿಕ್ಷಕರ ಅಗತ್ಯವಿದ್ದು, ಶಾಲಾ ಆವರಣದಲ್ಲಿ ಕೈತೋಟ, ಆಟದ ಮೈದಾನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗೆ ಬಯಲು ರಂಗಮಂದಿರದ ಜತೆಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂದು ಮುಖ್ಯ ಶಿಕ್ಷಕಿ ಜಿ.ಟಿ. ಉಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.