ಚಳ್ಳಕೆರೆ: ಉತ್ತಮ ಗುಣಮಟ್ಟ ಹೊಂದಿರುವ ನಂದಿನಿ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು, ಹಸು ಸಾಕಾಣಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಹೈನುಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಶಿಮೂಲ್ ಹಾಲು ಒಕ್ಕೂಟದ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಹೇಳಿದರು.
ನಗರದ ನಂದಿನಿ ಉಪ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಂದಿನಿ ಹಾಲು ಉತ್ಪನ್ನಗಳ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಬಯಲುಸೀಮೆ ಪ್ರದೇಶದಲ್ಲಿ ನೂರಾರು ಕುಟುಂಬಗಳು ಹಸು ಸಾಕಾಣಿಕೆ ಮೂಲಕ ಜೀವನ ನಡೆಸುತ್ತಿದ್ದು, ಮಕ್ಕಳ ಶಿಕ್ಷಣಕ್ಕೂ ಸಹಕಾರಿಯಾಗಿದೆ. ಮನೆ ಮನೆಗೆ ತೆರಳಿ ನಂದಿನಿ ಉತ್ಪನ್ನಗಳ ಪರಿಚಯ ಮಾಡಿಕೊಡುವ ಜತೆಗೆ ಅವುಗಳನ್ನು ಬಳಕೆ ಮಾಡುವಂತೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಮಾರಾಟಗಾರರಿಗೆ ಸಲಹೆ ನೀಡಿದರು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಮೂಲ್ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ನಂದಿನಿ ಉತ್ಪನ್ನಗಳ ಮಾರ್ಕೆಟಿಂಗ್ ಅಧಿಕಾರಿ ಇರ್ಫಾನ್ ತನ್ವಿ ಹೇಳಿದರು.
ಇದೇ ವೇಳೆ ಹಾಲು ಉತ್ಪಾದಕರು ಹಾಗೂ ಮಾರಾಟಗಾರರಿಗೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಕ್ಯಾರಿ ಬ್ಯಾಗ್, ರೈನ್‍ಕೋಟ್, ಜರ್ಕಿನ್, ಟಿ.ಶರ್ಟ್ ವಿತರಿಸಲಾಯಿತು.
ಕಚೇರಿ ಸಿಬ್ಬಂದಿ ಅಭಿಷೇಕ್, ಗೋವಿಂದರಾಜು, ದಿವಾಕರ್, ದಯಾನಂದ್, ಸುಶೀಲಾ, ಆನಂದ್, ಗೀತಾ, ಬೋರಣ್ಣ, ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.