
ಹಿರಿಯೂರು: ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸೇವಾ ರಸ್ತೆಗೆ ಬರದೇ ಹೆದ್ದಾರಿಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿಸಿ–ಇಳಿಸುತ್ತಿರುವ ಕಾರಣ ಪ್ರಯಾಣಿಕರಿಗೆ ಸುರಕ್ಷತೆಯ ಭಯ ಕಾಡುತ್ತಿದೆ.
ಮೇ 23 ರಂದು ಹೆದ್ದಾರಿಯಲ್ಲಿ ಸರಣಿ ಅಪಘಾತವೊಂದು ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ, ಹೆದ್ದಾರಿಗೆ ಇಳಿಯದಂತೆ ರಸ್ತೆ ಅಂಚಿನಲ್ಲಿ ಎತ್ತರದ ಗೋಡೆ ನಿರ್ಮಿಸಿ, ರಸ್ತೆಯಿಂದ ರಸ್ತೆಗೆ ದಾಟುವುದನ್ನು ತಪ್ಪಿಸಲು ವಿಭಜಕದ ಮೇಲೆ ತಂತಿ ಬೇಲಿ ಅಳವಡಿಸಿದ್ದರು. ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಚರ್ಚಿಸಿ ಹೆದ್ದಾರಿಯಲ್ಲಿ ಸಾಗುವ ಎಲ್ಲಾ ಬಸ್‌ಗಳು ಸೇವಾ ರಸ್ತೆಯ ಮೂಲಕ ಸಂಚರಿಸುವಂತೆ ಕ್ರಮ ಕೈಗೊಂಡಿದ್ದರು. ಆದರೆ ಒಂದೆರಡು ದಿನ ಸೇವಾ ರಸ್ತೆಯಲ್ಲಿ ಸಂಚರಿಸಿದ ಬಸ್‌ಗಳು ಮತ್ತೆ ಹಳೆಯ ಚಾಳಿ ಮುಂದುವರಿಸಿವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಾಲಿದ್ ಹುಸೇನ್ ಆರೋಪಿಸಿದ್ದಾರೆ.
ಸಾಹಸ ಮಾಡಬೇಕು: ಸೇವಾ ರಸ್ತೆಯಿಂದ ಹೆದ್ದಾರಿಗೆ ಬರಲು ಪ್ರಯಾಣಿಕರು ಹರಸಾಹಸ ಪಡಬೇಕು. ಬಸ್ ಹತ್ತಲು ಹೆದ್ದಾರಿ ಅಂಚಿಗೆ ಕಟ್ಟಿರುವ ಗೋಡೆಯನ್ನು ಹತ್ತಿ–ಇಳಿಯಬೇಕಿದೆ. ಹಿಂದಿನಂತೆ ಬಸ್‌ಗಳು ಹೆದ್ದಾರಿಯಲ್ಲಿ ನಿಲ್ಲುತ್ತಿರುವ ಕಾರಣ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಪ್ರಯುಕ್ತ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಬಸ್‌ಗಳೂ ಕಡ್ಡಾಯವಾಗಿ ಸೇವಾ ರಸ್ತೆಯಲ್ಲಿ ಬರುವಂತೆ ಮಾಡಬೇಕು. ಇಲ್ಲವಾದಲ್ಲಿ ಹೆದ್ದಾರಿ ಅಂಚಿಗೆ ಕಟ್ಟಿರುವ ಗೋಡೆಯನ್ನು ತೆರವುಗೊಳಿಸಿ ಅಲ್ಲಿ ನಾಲ್ಕನೇ ಮಾರ್ಗವೊಂದನ್ನು (ಆರು ಪಥದ ರಸ್ತೆಯನ್ನು ಎಂಟು ಪಥವನ್ನಾಗಿ) ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜವನಗೊಂಡನಹಳ್ಳಿ ಹೆದ್ದಾರಿ ಅವ್ಯವಸ್ಥೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಮೇ 30ರಂದು ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.