ADVERTISEMENT

ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ಗೆ ಕೈತಪ್ಪಿದ ಸಚಿವ ಸ್ಥಾನ;ಹೋರಾಟ ತೀವ್ರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:09 IST
Last Updated 7 ಆಗಸ್ಟ್ 2021, 2:09 IST
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಹಿರಿಯೂರಿನಲ್ಲಿ ಶುಕ್ರವಾರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು (ಎಡಚಿತ್ರ). ಪ್ರತಿಭಟನೆಯ ವೇಳೆ ಅಭಿಮಾನಿಗಳು ಉರುಳುಸೇವೆ ಮಾಡಿದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಹಿರಿಯೂರಿನಲ್ಲಿ ಶುಕ್ರವಾರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು (ಎಡಚಿತ್ರ). ಪ್ರತಿಭಟನೆಯ ವೇಳೆ ಅಭಿಮಾನಿಗಳು ಉರುಳುಸೇವೆ ಮಾಡಿದರು.   

ಹಿರಿಯೂರು: ಇಲ್ಲಿಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಜವನಗೊಂಡನಹಳ್ಳಿ, ಐಮಂಗಲ, ಧರ್ಮಪುರ, ಕಸಬಾ ಹೋಬಳಿಗಳು ಹಾಗೂ ನಗರದಿಂದ ಶುಕ್ರವಾರ ಸಾವಿರಾರು ಅಭಿಮಾನಿಗಳು ಪಾದಯಾತ್ರೆ, ಬೈಕ್ ರ್‍ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ಧರ್ಮಪುರದಿಂದ ನೂರಾರು ಸಂಖ್ಯೆಯ ಅಭಿಮಾನಿಗಳು ಪಾದಯಾತ್ರೆಯ ಮೂಲಕ ನಗರಕ್ಕೆ ಬಂದರೆ, ಜವನಗೊಂಡನಹಳ್ಳಿ, ಐಮಂಗಲ, ಯಲ್ಲದಕೆರೆ, ಕಸಬಾ ಮತ್ತು ಹಿರಿಯೂರು ನಗರದಿಂದ ನೂರಾರು ಬೆಂಬಲಿಗರು ಬೈಕ್‌ಗಳೊಂದಿಗೆ ಪ್ರಧಾನ ರಸ್ತೆಯಲ್ಲಿರುವ ರಂಜಿತ್ ಹೋಟೆಲ್ ವೃತ್ತದಲ್ಲಿ
ಜಮಾಯಿಸಿದ್ದರು.

ತೀವ್ರ ಆಕ್ರೋಶ: ‘ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ನ್ಯಾಯಾಧೀಶರಿಗೆ, ರಾಜ್ಯಪಾಲರಿಗೆ ಮಾಡಿಕೊಡುವುದುಂಟು. ಭ್ರಷ್ಟಾ
ಚಾರದ ಆರೋಪ ಹೊತ್ತವರೊಬ್ಬರಿಗೆ ಅಂತಹ ವ್ಯವಸ್ಥೆ ಕಲ್ಪಿಸಿ ಸಚಿವರನ್ನಾಗಿ ಪ್ರಮಾಣ ಬೋಧಿಸುವ ತುರ್ತು ಏನಿತ್ತು? ರಾಜ್ಯಕ್ಕೆ, ದೇಶಕ್ಕೆ ಅವರ ಕೊಡುಗೆ ಏನು? ನಮ್ಮ ಜಿಲ್ಲೆಯಲ್ಲಿ ಐದು ಬಾರಿ ಶಾಸಕರಾಗಿರುವ ಜಿ.ಎಚ್. ತಿಪ್ಪಾರೆಡ್ಡಿ, ಪರಿಶಿಷ್ಟ ಜನಾಂಗದ ಚಂದ್ರಪ್ಪ, ಗೂಳಿಹಟ್ಟಿ ಶೇಖರ್ ಇರಲಿಲ್ಲವೇ? ಇವರ್‍ಯಾರೂ ಬಿಜೆಪಿ ಮುಖಂಡರ ಕಣ್ಣಿಗೆ ಬೀಳಲಿಲ್ಲವೇ? ಸಚಿವರ ಆಯ್ಕೆಗೆ ಮಾನದಂಡಗಳೇನು? ಬಿಜೆಪಿಯಲ್ಲಿ ಕೆಲವರಿಗೆ ಸಚಿವ ಸ್ಥಾನ ಕಾಯಂ ಎಂಬಂತಾಗಿದೆ. ಐದಾರು ಬಾರಿ ಮಂತ್ರಿಗಿರಿ ಅನುಭವಿಸಿದವರನ್ನು ಬಿಟ್ಟು ಒಮ್ಮೆಯೂ ಸಚಿವರಾಗದವರಿಗೆ ಅವಕಾಶ ಕೊಡಬಹುದಿತ್ತಲ್ಲವೇ’ ಎಂದು ಪ್ರತಿಭಟನಾ ನಿರತರು ಪ್ರಶ್ನೆಗಳ ಸುರಿಮಳೆಗರೆದರು.

ADVERTISEMENT

‘ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹತ್ತು ವರ್ಷಗಳಿಂದ ಪೂರ್ಣ ಪ್ರಮಾಣದ ವೈದ್ಯರು, ಸಿಬ್ಬಂದಿ ಇರಲಿಲ್ಲ. ಆ ಕೊರತೆಯನ್ನು ಪೂರ್ಣಿಮಾ ನೀಗಿಸಿದ್ದರು. ಪಟ್ರೆಹಳ್ಳಿ ಸಮೀಪ ನೂರು ಹಾಸಿಗೆ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆಗಿದೆ. ಕೊರೊನಾ ಸೋಂಕಿತರಿಗೆ ಆಕ್ಸಿಜನ್–ಬೆಡ್ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಧರ್ಮಪುರ ಭಾಗದ ಕೆರೆಗಳಿಗೆ ನೀರು ಹರಿಸುವಂತೆ ನೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತೆರೆ ಎಳೆದು ₹ 90 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಸುಮಾರು ₹ 800 ಕೋಟಿ ಅನುದಾನ ತಂದು ಬ್ಯಾರೇಜ್, ಚೆಕ್ ಡ್ಯಾಂ, ಶಾಲಾ–ಕಾಲೇಜು ಕಟ್ಟಡ, ಅಂಗನವಾಡಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಕಾರಣರಾಗಿದ್ದು, ಸೇವಾ ಬದ್ಧತೆ ಹೊಂದಿರುವ, ಉನ್ನತ ಶಿಕ್ಷಣ ಪಡೆದಿರುವ ಪಕ್ಷನಿಷ್ಠೆಗೆ ಹೆಸರಾಗಿರುವ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದೇ ಹೋದರೆ ಅದು ಬಿಜೆಪಿ ಅವನತಿಗೆ ನಾಂದಿ ಹಾಡಿದಂತೆ’ ಎಂದು ಪ್ರತಿಭಟನಕಾರರು
ಎಚ್ಚರಿಸಿದರು.

ರಂಜಿತ್ ಹೋಟೆಲ್ ವೃತ್ತದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಸಾರ್ವಜನಿಕ ಆಸ್ಪತ್ರೆ, ಡಾ.ರಾಜ್‌ಕುಮಾರ್ ವೃತ್ತ ದಾಟಿ ಗಾಂಧಿ ವೃತ್ತಕ್ಕೆ ಬಂದಾಗ ಹಲವು ಅಭಿಮಾನಿಗಳು ಉರುಳು ಸೇವೆ ಮಾಡಿದರು. ನಂತರ ಪ್ರತಿಭಟನಕಾರರು ತಾಲ್ಲೂಕು ಕಚೇರಿಯ ಆವರಣಕ್ಕೆ ಹೋದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಹಾಲಿ–ಮಾಜಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಜುಲೈ 4ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಲಾಗಿತ್ತು. ಜುಲೈ 5ರಂದು ಹಿಂದುಳಿದ ವರ್ಗದವರು ಒಳಗೊಂಡಂತೆ ಎಲ್ಲ ಸಮುದಾಯದವರು ಲಕ್ಷ್ಮಮ್ಮತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಸಚಿವ ಸ್ಥಾನ ನೀಡುವವರೆಗೆ ಹೋರಾಟದ ಎಚ್ಚರಿಕೆ
ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.