
ಹಿರಿಯೂರು: ‘ನಗರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲೆಂದು 16 ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಇನ್ನು ಮುಂದೆ ನಾಗರೀಕರು ಎಲ್ಲೆಂದರಲ್ಲಿ ನಾಯಿಗಳಿಗೆ ಆಹಾರ ನೀಡಿದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದಂಡ ವಿಧಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎ. ವಾಸೀಂ ಎಚ್ಚರಿಸಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕುರಿತು ಕರೆದಿದ್ದ ನಾಗರಿಕರು ಹಾಗೂ ನಗರಸಭೆ ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಗರದಲ್ಲಿರುವ ಕೋಳಿ ಮತ್ತು ಮಾಂಸದ ಅಂಗಡಿಯವರು ನಗರವನ್ನು ಸ್ವಚ್ಛವಾಗಿಡಲು ಸಹಕಾರ ನೀಡಬೇಕು. ಮಾಂಸದಂಗಡಿಯ ತ್ಯಾಜ್ಯವನ್ನು ಚರಂಡಿಗೆ ಬಿಡುವುದು, ವೇದಾವತಿ ನದಿಗೆ ಹಾಕುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ, ಇನ್ನೂ ಬರುತ್ತಲೇ ಇವೆ. ಇಂತಹ ಕೃತ್ಯದಿಂದ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ನೋಡಿಕೊಂಡು ಸುಮ್ಮನಿರಲಾಗದು. ಇನ್ನು ಮುಂದೆ ದಂಡ ಖಚಿತ ಎಂಬುದನ್ನು ನೆನಪಿನಲ್ಲಿ ಇಡಬೇಕು’ ಎಂದು ಕೋಳಿ ಮತ್ತು ಮಾಂಸದ ಅಂಗಡಿ ಮಾಲೀಕರಿಗೆ ಪೌರಾಯುಕ್ತರು ಖಡಕ್ ಎಚ್ಚರಿಕೆ ನೀಡಿದರು.
‘ನಾಯಿಗಳಿಗೆ ನಗರಸಭೆ ಗುರುತಿಸಿದ ಜಾಗದಲ್ಲಿ ಆಹಾರ ನೀಡಬೇಕು. ಬೀದಿ ನಾಯಿಗಳ ಮೇಲೆ ಹಲ್ಲೆಗೆ ಮುಂದಾದರೆ ಪ್ರಾಣಿ ದಯಾ ಸಂಘದವರು ಪೊಲೀಸರಿಗೆ ದೂರು ನೀಡುತ್ತಾರೆ. ಅಗತ್ಯ ಕಂಡು ಬಂದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ. ಹೀಗಾಗಿ ಯಾರೂ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಬಾರದು. ನಗರದ ಬಹುತೇಕ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಅದರಲ್ಲಿನ ದೃಶ್ಯಗಳನ್ನು ನೋಡಿ ದಂಡ ಹಾಕಲಾಗುವುದು’ ಎಂದು ವಾಸೀಂ ತಿಳಿಸಿದರು.
ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ಮಹಲಿಂಗರಾಜು, ಚಂದ್ರಕೀರ್ತಿ ಗುಜ್ಜಾರ್ ಹಾಗೂ ಮಾಂಸ ಮಾರುಕಟ್ಟೆ ವರ್ತಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.