
ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಪುರದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಿಸುವ ಸಲುವಾಗಿ ಸುತ್ತಮುತ್ತಲ ಐದು ಹಳ್ಳಿಗಳ ಶಾಲೆಗಳನ್ನು ಮುಚ್ಚುತ್ತಿರುವ ಪ್ರಕ್ರಿಯೆ ಖಂಡಿಸಿ ಶನಿವಾರ ಭರಮಗಿರಿ ಮತ್ತು ಕಕ್ಕಯ್ಯನಹಟ್ಟಿ ಗ್ರಾಮಸ್ಥರು ಎಐಡಿಎಸ್ಒ ನೇತೃತ್ವದಲ್ಲಿ ಶಾಲೆಗಳ ಮುಂದೆ ಪ್ರತಿಭಟನೆ ನಡೆಸಿದರು.
‘ಪ್ರಾಣ ಕೊಟ್ಟೇವು, ಶಾಲೆ ಮುಚ್ಚಲು ಬಿಡುವುದಿಲ್ಲ’ ಎಂಬ ಘೋಷಣೆ ಕೂಗಿದ ಪೋಷಕರು, ವಿದ್ಯಾರ್ಥಿಗಳು ಸರ್ಕಾರದ ಅವೈಜ್ಞಾನಿಕ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿ ಹಳ್ಳಿಗೂ ಶಾಲೆ ಅವಶ್ಯ. ಒಂದು ಮಗುವಿದ್ದರೂ ಶಾಲೆ ನಡೆಸುತ್ತೇವೆ ಎಂದು ಶಿಕ್ಷಣ ಸಚಿವರು ಹೋದಲ್ಲೆಲ್ಲ ಹೇಳುತ್ತಿದ್ದಾರೆ. ಆದರೆ ಇಲ್ಲಿ ನೋಡಿದರೆ 5 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗೆ ಸೇರಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಇದು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡವರು, ಕೂಲಿಕಾರರ ಮಕ್ಕಳಿಗೆ ಎಸಗುತ್ತಿರುವ ವಿಶ್ವಾಸದ್ರೋಹ’ ಎಂದು ಎಐಡಿಎಸ್ಒ ಚಿತ್ರದುರ್ಗ ಜಿಲ್ಲಾ ಸಂಘಟನಕಾರ ಮಹಾಂತೇಶ ಬಿಳೂರ್ ಬೇಸರ ಹೊರಹಾಕಿದರು.
‘ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯದಲ್ಲಿನ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕೆಪಿಎಸ್ ಶಾಲೆಗಳನ್ನು ಹೊರಗುತ್ತಿಗೆ ಕೊಡುತ್ತಿರುವ ಸರ್ಕಾರ ಪ್ರತಿ ಶಾಲೆಯು ಆದಾಯ ಸಂಗ್ರಹಿಸಬೇಕೆಂದು ಆದೇಶದಲ್ಲಿ ತಿಳಿಸಿದೆ. ಕೆಪಿಎಸ್ ಶಾಲೆಗಳ ಮೂಲಕ ಹಳ್ಳಿಯ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ನೆಪದಲ್ಲಿ ಸುಳ್ಳು ಹೇಳಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಜೊತೆಗೆ ಕೆಪಿಎಸ್ ಶಾಲೆಗಳನ್ನು ಖಾಸಗಿಯವರಿಗೆ ನೀಡಿ ಇಡೀ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡುವ ಸರ್ಕಾರದ ಹುನ್ನಾರ ಖಂಡನೀಯ’ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
‘ಸರ್ಕಾರ ಮುಚ್ಚಲು ಹೊರಟಿರುವ ಭರಮಗಿರಿ ಶಾಲೆಯಲ್ಲಿ 64 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಕುರುಬರಹಳ್ಳಿಯಲ್ಲಿ 53 ವಿದ್ಯಾರ್ಥಿಗಳು ನಾಲ್ವರು ಶಿಕ್ಷಕರಿದ್ದಾರೆ. ಕಕ್ಕಯನಹಟ್ಟಿಯಲ್ಲಿ 19 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಕಂಬದಹಳ್ಳಿಯಲ್ಲಿ 15 ವಿದ್ಯಾರ್ಥಿಗಳು ಒಬ್ಬ ಶಿಕ್ಷಕರು ಹಾಗೂ ಅಗಳೇರಹಟ್ಟಿಯಲ್ಲಿ 4 ವಿದ್ಯಾರ್ಥಿಗಳು ಒಬ್ಬರು ಶಿಕ್ಷಕರಿದ್ದಾರೆ. ಈ ಎಲ್ಲಾ ಹಳ್ಳಿಗಳು ವಾಣಿವಿಲಾಸಪುರದಿಂದ ನಾಲ್ಕೈದು ಕಿ.ಮೀ. ದೂರದಲ್ಲಿವೆ. ಭರಮಗಿರಿ ಹೊರತುಪಡಿಸಿದರೆ ಬೇರೆ ಯಾವ ಶಾಲೆಗೂ ಸಾರಿಗೆ ಸೌಲಭ್ಯಗಳಿಲ್ಲ. ವಾಸ್ತವ ಹೀಗಿರುವಾಗ ಒಂದರಿಂದ 7ನೇ ತರಗತಿಯ ಬಡಮಕ್ಕಳ ಓದಿಗೆ ಸರ್ಕಾರ ಕಲ್ಲು ಹಾಕಿದಂತೆ ಆಗುವುದಿಲ್ಲವೇ?’ ಎಂದು ಮಹಂತೇಶ್ ಪ್ರಶ್ನಿಸಿದರು.
‘ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಈಶ್ವರಚಂದ್ರ ವಿದ್ಯಾಸಾಗರ್ ಸೇರಿ ಅನೇಕ ಮಹನೀಯರ ಹೋರಾಟದ ಪರಿಣಾಮ ಇಂದು ದೇಶದ ಎಲ್ಲೆಡೆ ಶಾಲೆಗಳು ತೆರೆದಿದೆ. ಈ ಶಾಲೆಗಳನ್ನು ಮುಚ್ಚಿ ಬಡಮಕ್ಕಳ ಭವಿಷ್ಯವನ್ನು ಬೀದಿಪಾಲು ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ಜನರೆಲ್ಲ ಒಂದಾಗಿ ಹೋರಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ವಿವಿಪುರ ಗ್ರಾಮ ಪಂಚಾಯಿತಿ ಸದಸ್ಯ ಕಣುಮಪ್ಪ ಮಾತನಾಡಿ, ‘ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರಕ್ಕೆ ಕಾಳಜಿ ಇದ್ದರೆ ಎಲ್ಲ ಸೌಲಭ್ಯಗಳನ್ನು ನಮ್ಮೂರಲ್ಲಿರುವ ಶಾಲೆಯಲ್ಲೇ ಒದಗಿಸಲಿ. ಅದನ್ನು ಬಿಟ್ಟು ಶಾಲೆ ಮುಚ್ಚುವುದರಿಂದ ಬಡ ಕೂಲಿಕಾರರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಯೋಜನೆಯನ್ನು ಸರ್ಕಾರವು ಹಿಂಪಡೆಯಬೇಕು’ ಎಂದು ಕಕ್ಕಯನಹಟ್ಟಿ ಕೆಂಚಪ್ಪ ಆಗ್ರಹಿಸಿದರು.
ಸರ್ಕಾರ ತನ್ನ ನಿರ್ಧಾರ ಹಿಂಪಡೆಯುವವರೆಗೆ ಹೋರಾಟ ನಡೆಸಲು ಗ್ರಾಮಸ್ಥರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿಯ ಲೋಕೇಶ್, ಶಿವರಾಜ್, ರಾಜಪ್ಪ, ಕೆಂಚಪ್ಪ, ರಂಗನಾಥ, ಮಹಾಲಿಂಗಪ್ಪ ಹಾಗೂ ಉಭಯ ಗ್ರಾಮಗಳ ಪಾಲಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.