ಹಿರಿಯೂರು: ಇದು ಹೆಸರಿಗೆ ಮಾತ್ರ ತಾಲ್ಲೂಕು ಕ್ರೀಡಾಂಗಣ. ಇಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಕ್ರೀಡಾ ತರಬೇತುದಾರರು, ಸೋರದೇ ಇರುವ ಚಾವಣಿ ಇಲ್ಲ. ಅದೆಲ್ಲ ಇರಲಿ, ಆಟದ ಅಂಕಣಗಳೂ ಇಲ್ಲ.
ಮೇಲಿನ ಸೌಲಭ್ಯಗಳಿಗೆ ಬೇಡಿಕೆ ಇರಿಸಿದರೆ ಅಧಿಕಾರಿಗಳಿಂದ ಬರುವ ಸಿದ್ಧ ಉತ್ತರ ‘ಶೀಘ್ರದಲ್ಲಿಯೇ ವ್ಯವಸ್ಥೆ ಮಾಡುತ್ತೇವೆ’ ಎಂಬುದಾಗಿದೆ.
ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣ ಮಳೆಗಾಲದಲ್ಲಿ ಜಾನುವಾರುಗಳು ಮೇಯಲು ಉತ್ತಮ ಹುಲ್ಲುಗಾವಲು. ಬೇಸಿಗೆ ಕಾಲದಲ್ಲಿ ಬರಡು ಭೂಮಿ. ಅಂಕಣಗಳಲ್ಲಿ ನಡೆದಾಡಿದರೆ ದೂಳು ಚಿಮ್ಮುತ್ತದೆ.
‘ಕ್ರೀಡಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಿಗಳು, ಕ್ರೀಡಾಪಟುಗಳು ನಡೆದಾಡುವ ಜಾಗ ಬಿಟ್ಟರೆ ಇಡೀ ಕ್ರೀಡಾಂಗಣ ಹುಲ್ಲುಮಯವಾಗಿರುವುದು ಕಣ್ಣಿಗೆ ಬೀಳುತ್ತದೆ. ಕ್ರೀಡಾಂಗಣದಲ್ಲಿ ಹೆಚ್ಚು ಕಾಣುವುದು ಮುಟ್ಟಿದರೆಮುನಿ ಗಿಡ. ಅವು ಕೂಡ ‘ನಮ್ಮನ್ನು ಮುಟ್ಟಬೇಡಿ’ ಎಂದು ಹೇಳುತ್ತಿರಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿ ಚಮನ್ ಷರೀಫ್.
ಮಳೆಗಾಲದಲ್ಲಿ ಮೊಳಕಾಲೆತ್ತರಕ್ಕೆ ಬೆಳೆದ ಹುಲ್ಲನ್ನು ಸಮೀಪದ ಬಡಾವಣೆಗಳ ದನಗಾಯಿಗಳು ನಿತ್ಯ ಕತ್ತರಿಸಿಕೊಂಡು ಹೋಗುತ್ತಿರುವ ಕಾರಣಕ್ಕೆ ಹುಲ್ಲು ಸ್ವಲ್ಪ ಕಡಿಮೆಯಾಗಿದೆ. ಇಲ್ಲವಾದಲ್ಲಿ ಇಡೀ ಕ್ರೀಡಾಂಗಣ ಹುಲ್ಲುಗಾವಲಿನಿಂತೆ ಗೋಚರಿಸುತ್ತಿತ್ತು ಎಂದೂ ಅವರು ಹೇಳುತ್ತಾರೆ.
‘1 ಲಕ್ಷ ಜನಸಂಖ್ಯೆ ಇರುವ ನಗರಕ್ಕೆ ಹೇಳಿಕೊಳ್ಳುವಂತಹ ಒಂದು ಕ್ರೀಡಾಂಗಣ ಬೇಡವೇ?’ ಎಂಬ ಪ್ರಶ್ನೆಗೆ ಹಲವು ವರ್ಷಗಳಿಂದ ಉತ್ತರ ಸಿಗುತ್ತಿಲ್ಲ. ಮೈದಾನದ ಅಭಿವೃದ್ಧಿಗೆ ಅಲ್ಲಿನ ವಾಯುವಿಹಾರಿಗಳು ಸಮನ್ವಯ ಕ್ರೀಡಾ ಸಮಿತಿ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದು, ಸಮಾರಂಭಗಳಿಗೆ ಬರುವ ಜನಪ್ರತಿನಿಧಿಗಳಿಗೆ ಸಲ್ಲಿಸಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ಮೈದಾನದ ದುಃಸ್ಥಿತಿ ನೋಡಲಾಗದೆ ಕೆಲವೊಮ್ಮೆ ಸಮಿತಿಯ ಸದಸ್ಯರೆಲ್ಲ ಸೇರಿ ದೊಡ್ಡದೊಡ್ಡ ಗಿಡಗಳನ್ನು ಕಿತ್ತು ಹಾಕಿದ್ದೇವೆ’ ಎನ್ನುತ್ತಾರೆ ಸಮನ್ವಯ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಕೆ.ಸಿ. ಹೊರಕೇರಪ್ಪ.
ವ್ಯವಸ್ಥೆಯ ಅಣಕ
ಹಿರಿಯೂರಿನಲ್ಲಿ ಕಬಡ್ಡಿ, ಕೊಕ್ಕೊ, ಅಥ್ಲೆಟಿಕ್ಸ್ ಕ್ರೀಡಾಪಟುಗಳಿದ್ದಾರೆ. ಹತ್ತು ವರ್ಷಗಳ ಹಿಂದೆ ಬಹುತೇಕ ಕ್ರೀಡಾಪಟುಗಳು ನಗರದ ಮಧ್ಯ ಭಾಗದಲ್ಲಿರುವ ನೆಹರೂ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರು. ಜನಸಂಖ್ಯೆ ಹೆಚ್ಚಿರುವ ಕಾರಣ ಏಕಾಗ್ರತೆಯಿಂದ ಅಲ್ಲಿ ಅಭ್ಯಾಸ ನಡೆಸಲು ಆಗದೆ ದೂರ ಎನಿಸಿದರೂ ಹುಳಿಯಾರು ರಸ್ತೆಯಲ್ಲಿನ ವಿಶಾಲವಾದ ಕ್ರೀಡಾಂಗಣಕ್ಕೆ ಹೋಗುವುದು ಅನಿವಾರ್ಯ ಆಗಿತ್ತು. ಆದರೆ ಕ್ರೀಡಾಂಗಣದಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ಅಂಕಣವಿಲ್ಲ. ಕ್ರಿಕೆಟ್ ಆಡುವ ಹುಡುಗರು ಪಿಚ್‌ಗೆ ಅಗತ್ಯ ಇರುವಷ್ಟು ಜಾಗದ ಹುಲ್ಲು ತೆಗೆದು ಆಡುತ್ತಿದ್ದರೆ, ಕೊಕ್ಕೊ ಅಭ್ಯಾಸ ಮಾಡುವವರು ತಮಗೆ ಅಗತ್ಯ ಇರುವಷ್ಟು ಅಂಕಣವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಉಳಿದಂತೆ ವಾಯು ವಿಹಾರಿಗಳು ಹುಲ್ಲು ಇಲ್ಲದ ಕಡೆಯ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಕ್ರೀಡಾಂಗಣದ ಒಂದು ಭಾಗದ ಪೆವಿಲಿಯನ್‌ಗೆ ನಿರ್ಮಿಸಿದ್ದ ಚಾವಣಿ ಬಿರುಗಾಳಿಗೆ ಹಾರಿ ಕ್ರೀಡಾಂಗಣದ ಹೊರಗಿನ ಹೊಲದಲ್ಲಿ ಬಿದ್ದಿತ್ತು. ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಚಾವಣಿ ಸಿದ್ಧಪಡಿಸಿದ್ದು, ಮಳೆ ಬಂದಾಗ ಪೆವಿಲಿಯನ್ ಕೆಳಗೆ ಕೂರಲಾಗದಷ್ಟು ಸೋರುತ್ತದೆ. ಕಳಪೆ ಕಾಮಗಾರಿ ಇದಕ್ಕೆ ಕಾರಣ ಎಂಬುದು ಸಾರ್ವಜನಿಕರ ಆರೋಪ.
ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಾಷ್ಟ್ರೀಯ ಹಬ್ಬಗಳನ್ನು ನೆಹರೂ ಮೈದಾನದಿಂದ ತಾಲ್ಲೂಕು ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಿಸಿದ್ದರು. ಮೈದಾನದ ಸುತ್ತ ಕಾಂಪೌಂಡ್, ಪೆವಿಲಿಯನ್ ಎದುರು ಭಾಗದಲ್ಲಿ ಶೀಟ್ ಹೊದಿಕೆಯ ಗ್ಯಾಲರಿ ನಿರ್ಮಿಸಲಾಗಿತ್ತು. ಆದರೆ, ಈಚೆಗೆ ಕ್ರೀಡಾಂಗಣ ದೂರ ಎಂಬ ಕಾರಣಕ್ಕೆ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಮೊದಲಿನಂತೆ ನೆಹರೂ ಮೈದಾನದಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ತಾಲ್ಲೂಕು ಕ್ರೀಡಾಂಗಣ ಮತ್ತಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದೆ’ ಎಂದು ಅನೇಕರು ಹೇಳುತ್ತಾರೆ.
ಹೊಸದುರ್ಗ ಪಟ್ಟಣದಲ್ಲಿ ಸಿಂಥೆಟಿಕ್ ಒಳಾಂಗಣ ಕ್ರೀಡಾಂಗಣವಿದೆ. ನಗರಸಭೆ ಇದ್ದರೂ ಹಿರಿಯೂರಿನಲ್ಲಿ ವ್ಯವಸ್ಥಿತ ಕ್ರೀಡಾಂಗಣವಿಲ್ಲ. ತಾಲ್ಲೂಕು ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಾಯು ವಿಹಾರಿಗಳ ಓಡಾಟಕ್ಕೆ ಪ್ರತ್ಯೇಕ ಮಾರ್ಗ, ಎಲ್ಲ ಆಟಗಳಿಗೆ ಸಿಂಥೆಟಿಕ್ ಅಂಕಣ, ಅಥ್ಲೆಟಿಕ್ ಮತ್ತು ಗುಂಪು ಆಟಗಳಿಗೆ ಕಾಯಂ ತರಬೇತುದಾರರ ನೇಮಕ ಆಗಬೇಕು ಎಂಬುದು ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳ ಒತ್ತಾಯ.
ಯೋಜನೆ ಸಿದ್ಧಪಡಿಸುತ್ತಿದ್ದೇವೆ
ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕ್ರೀಡೆಗಳಿಗೆ ಅಗತ್ಯವಿರುವ ಅಂಕಣಗಳನ್ನು ನಿರ್ಮಿಸಲು ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದಾರೆ. ಯುವ ಸಬಲೀಕರಣ ಇಲಾಖೆಯಿಂದ ಅನುದಾನ ಬರಲಿದ್ದು ಶೀಘ್ರವೇ ಅಂಕಣ ನಿರ್ಮಿಸುತ್ತೇವೆ. ಚಾವಣಿ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿಯಿಂದ ನಿರ್ವಹಿಸಲಾಗಿದೆ. ಸೋರುತ್ತಿದ್ದರೆ ಅದನ್ನು ಅವರೇ ಸರಿಪಡಿಸಬೇಕಾಗುತ್ತದೆ.– ವಿನಯ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೂಸೇನಾ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.