ADVERTISEMENT

ಹಿರಿಯೂರು | ನೀರಿಗಾಗಿ ಯಾರನ್ನು ಬೇಡಬೇಕು: ಸಂಸದ ಪ್ರಶ್ನೆ

ಹಿರಿಯೂರು: ಹಳ್ಳಿಗಳಲ್ಲಿ ನೀರಿಗಾಗಿ ಪರದಾಡುತ್ತಿರುವ ಸಾರ್ವಜನಿಕರು; ಕೈಗೆ ಸಿಗದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:27 IST
Last Updated 15 ಜುಲೈ 2025, 7:27 IST
ಹಿರಿಯೂರಿನ  ಸಾಮರ್ಥ್ಯಸೌಧದಲ್ಲಿ ಸೋಮವಾರ ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು 
ಹಿರಿಯೂರಿನ  ಸಾಮರ್ಥ್ಯಸೌಧದಲ್ಲಿ ಸೋಮವಾರ ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು    

ಹಿರಿಯೂರು: ‘ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಹಳ್ಳಿಗೆ ಬಂದು ಸಮಸ್ಯೆ ಆಲಿಸುತ್ತಿಲ್ಲ ಎಂದು ಛೀಮಾರಿ ಹಾಕುತ್ತಿದ್ದಾರೆ. ಜನರಿಗೆ ನೀರು ಕೊಡುವ ಹೊಣೆಗಾರಿಕೆ ಯಾರದ್ದು? ಜನ ಯಾರನ್ನು ಕೇಳಬೇಕು?’ ಎಂದು ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ತರಾಟೆಗೆ ತೆಗೆದುಕೊಂಡರು.

ನಗರದ ಹುಳಿಯಾರು ರಸ್ತೆಯಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ದಿಂಡಾವರ, ಗೌಡನಹಳ್ಳಿ, ಕರಿಯಾಲ, ಯಲ್ಲದಕೆರೆ, ಜೆ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ಯಾವಾಗಲೂ ನೀರಿನ ಸಮಸ್ಯೆ ಕಾಡುತ್ತಿದೆ. 2–3 ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ನೀರಿನ ಸಮಸ್ಯೆ ಹೆಚ್ಚಿದೆ. ಕೆಲವು ಕಡೆ ಕೊಳವೆ ಬಾವಿಗಳನ್ನು ರೀಬೋರ್ ಮಾಡಿಸಿದ್ದೇವೆ. ರೈತರ ಜಮೀನುಗಳಿಂದಲೂ ನೀರು ಪಡೆದು ಟ್ಯಾಂಕರ್ ಮೂಲಕ ಕೊಡುತ್ತಿದ್ದೇವೆ. ಟ್ಯಾಂಕರ್ ನೀರು ಸಾಕಾಗುತ್ತಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ’ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಹಸೇನ್‌ಭಾಷಾ ಉತ್ತರಿಸಿದರು.

ADVERTISEMENT

‘ಒಂದು ಸಣ್ಣ ಮೋಟಾರ್ ಅಳವಡಿಸಿ ನೀರು ಕೊಡಲು ಮೂರು ವರ್ಷ ಬೇಕೆ? ಊಟ ಇಲ್ಲದಿದ್ದರೂ ಇರಬಹುದು, ನೀರು ಇಲ್ಲದೆ ಬದುಕಲು ಸಾಧ್ಯವೇ? ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಜನರು ಉಳಿಯುತ್ತಾರೆಯೇ? ಮತಪಡೆದ ನಾವು ಹೇಗೆ ಅವರನ್ನು ಎದುರಿಸಬೇಕು? ಟ್ಯಾಂಕರ್ ಬದಲು ಪೈಪ್‌ಲೈನ್ ವ್ಯವಸ್ಥೆ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ’ ಎಂದು ಸಂಸದರು ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಹಸೇನ್ ಭಾಷಾ ಮಾತನಾಡಿ, ‘ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 6,030 ಮನೆಗಳ ಗುರಿ ಹೊಂದಿದ್ದು, 520ಕ್ಕೆ ಅನುಮೋದನೆ ದೊರೆತಿದೆ. ಅವುಗಳಲ್ಲಿ 92 ಪ್ರಗತಿಯಲ್ಲಿವೆ. 3,447 ಅನರ್ಹವಾಗಿವೆ’ ಎಂದು ಮಾಹಿತಿ ನೀಡಿದರು.

‘ನಗರದಲ್ಲಿ ‘ಜಿ–ಪ್ಲಸ್ ಟು’ ಯೋಜನೆಯಡಿ 634 ಮನೆಗಳಲ್ಲಿ ಈಗಾಗಲೇ 400 ಮನೆಗಳು ಪೂರ್ಣಗೊಂಡಿವೆ. 202 ಫಲಾನುಭವಿಗಳು ಅಗತ್ಯ ದಾಖಲೆ ಸಲ್ಲಿಸಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ವಾಸೀಂ ತಿಳಿಸಿದರು.

‘ಬಡವರು ಮನೆಗಳಿಲ್ಲವೆಂದು ಅಲೆಯುತ್ತಿದ್ದಾರೆ. ಸೂರು ಇಲ್ಲದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ಕೊಡುವ ಕೆಲಸ ಮಾಡಿ’ ಎಂದು ಕಾರಜೋಳ ಸೂಚಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ‘ಹಿಂದಿನ ವರ್ಷ ಫಸಲ್ ಭಿಮಾ ಯೋಜನೆಯಡಿ ₹ 11 ಕೋಟಿ ಅನುದಾನ ಬಂದಿತ್ತು. ಕಿಸಾನ್‌ಸಮ್ಮಾನ್ ಯೋಜನೆಯ 19ನೇ ಕಂತಿನ ಹಣ ಬರಬೇಕು. ಈ ಬಾರಿ ಮಳೆ  ಕೊರತೆಯಿಂದ ಕೇವಲ ಶೇ 9ರಷ್ಟು ಮಾತ್ರ ಬಿತ್ತನೆಯಾಗಿದೆ’ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೃಷ್ಣಮೂರ್ತಿ ಮಾತನಾಡಿ, ‘ಹಿರಿಯೂರು ಉಪವಿಭಾಗದಲ್ಲಿ ಎಂಡಿಆರ್ 410 ಕಿ.ಮೀ. ಹಾಗೂ ಎಸ್‌ಎಚ್ 12 ಕಿ.ಮೀ ವ್ಯಾಪ್ತಿ ಹೊಂದಿದ್ದು, ₹ 25 ಕೋಟಿ ಅನುದಾನ ಮಾತ್ರ ಬಂದಿದೆ’ ಎಂದಾಗ, ‘ಇಷ್ಟು ಕಡಿಮೆ ಹಣದಲ್ಲಿ ಹೇಗೆ ರಸ್ತೆ ಅಭಿವೃದ್ಧಿ ಮಾಡುತ್ತೀರಿ? ಸರ್ಕಾರದಲ್ಲಿ ಹಣವಿಲ್ಲದ ಕಾರಣಕ್ಕೆ ಅನುದಾನ ಬಂದಿರಲಿಕ್ಕಿಲ್ಲ’ ಎಂದು ಸಂಸದರು ಸಂಶಯ ವ್ಯಕ್ತಪಡಿಸಿದರು.

‘ಬೆಸ್ಕಾಂ ಇಲಾಖೆ ಅಧಿಕಾರಿಗಳು ಜನತೆಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಇದಕ್ಕೆ ಅವಕಾಶ ಕೊಡಬಾರದು’ ಎಂದು ಬೆಸ್ಕಾಂ ಎಇಇ ಪೀರ್‌ಸಾಬ್ ಅವರಿಗೆ ಕಾರಜೋಳ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಹಾಗೂ ತಾಲ್ಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಇದ್ದರು.

ಪಕ್ಷ ನೋಡದೆ ಕೆಲಸ ಮಾಡಿ: ಸಂಸದ ‘ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆ ಎಂಬ ಕಾರಣಕ್ಕೆ ನಮ್ಮ ಪಕ್ಷದ ಕಾರ್ಯರ್ತರು ಹೇಳುವ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಬಹಳಷ್ಟು ಜನ ದೂರುತ್ತಿದ್ದಾರೆ. ರಾಜಕೀಯದಲ್ಲಿ 30 ವರ್ಷಗಳಿಂದ ಇದ್ದೇನೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ನೀವು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸಂಸದರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.