ADVERTISEMENT

ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ಭರ್ತಿಗೆ ಎರಡೂವರೆ ಅಡಿ ಬಾಕಿ

88 ವರ್ಷಗಳ ನಂತರ ಸಂಗ್ರಹವಾದ ನೀರು

ಜಿ.ಬಿ.ನಾಗರಾಜ್
Published 19 ಆಗಸ್ಟ್ 2022, 4:11 IST
Last Updated 19 ಆಗಸ್ಟ್ 2022, 4:11 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು ಮನಮೋಹಕವಾಗಿ ಕಾಣುತ್ತಿದೆ.ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು ಮನಮೋಹಕವಾಗಿ ಕಾಣುತ್ತಿದೆ.ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ   

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿಯ ಮಾರಿಕಣಿವೆಯಲ್ಲಿ ನಿರ್ಮಿಸಿರುವ ವಾಣಿವಿಲಾಸ ಸಾಗರ ಜಲಾಶಯ ಭರ್ತಿಗೆ ಎರಡೂವರೆ ಅಡಿ ಮಾತ್ರ ಬಾಕಿ ಇದೆ.

88 ವರ್ಷಗಳ ಬಳಿಕ ಭಾರಿ ಪ್ರಮಾಣದ ನೀರು ಹರಿದುಬಂದಿದೆ. ಜಲಾಶಯ ಕೋಡಿ ಬೀಳುವ ಐತಿಹಾಸಿಕ ಕ್ಷಣಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮವಾಗಿ ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ಅಪಾರ ಪ್ರಮಾಣದ ನೀರು ವಿ.ವಿ.ಸಾಗರ ಜಲಾಶಯದ ಒಡಲು ಸೇರುತ್ತಿದೆ. 1934ರ ಬಳಿಕ ಜಲಾಶಯದ ನೀರಿನ ಮಟ್ಟ 128 ಅಡಿಗೆ ತಲುಪಿದ್ದು ಇದೇ ಮೊದಲು.

ADVERTISEMENT

30 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯದ ಗರಿಷ್ಠ ಮಟ್ಟ 130 ಅಡಿ. 1933ರಲ್ಲಿ ಜಲಾಶಯ ಭರ್ತಿಯಾಗಿ ಕೋಡಿಬಿದ್ದ ಇತಿಹಾಸವಿದೆ. 1934ರಲ್ಲಿ 130 ಅಡಿ ತಲುಪಿದರೂ ನೀರು ಕೋಡಿ ಮೂಲಕ ಹೊರಗೆ ಹೋಗಿರಲಿಲ್ಲ. ಜಲಾಶಯದಲ್ಲಿ ಸದ್ಯ 28.6 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಜಲಾಶಯವನ್ನು ಮೈಸೂರು ಅರಸರು ನಿರ್ಮಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ತಾಯಿ ಕೆಂಪನಂಜಮ್ಮಣ್ಣಿ ಹೆಸರಿನಲ್ಲಿ ವೇದಾವತಿ ನದಿಗೆ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ 1897ರಲ್ಲಿ ಚಾಲನೆ ನೀಡಿದ್ದರು. ₹ 45 ಲಕ್ಷ ವೆಚ್ಚದ ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1907ರಲ್ಲಿ ಪೂರ್ಣಗೊಂಡಿತ್ತು.

2017ರಲ್ಲಿ ಜಲಾಶಯದ ನೀರಿನ ಮಟ್ಟ 66 ಅಡಿಗೆ ಕುಸಿದು ಡೆಡ್‌ ಸ್ಟೋರೇಜ್‌ ತಲುಪಿತ್ತು. ಹಿರಿಯೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ನಗರದ ಕುಡಿಯುವ ನೀರನ ಮೂಲವಾಗಿರುವ ಈ ಜಲಾಶಯದ ನೀರಿನ ಮಟ್ಟ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸಲು ಆರಂಭಿಸಿದ ಬಳಿಕ ಹೆಚ್ಚತೊಡಗಿದೆ. 2021ರಲ್ಲಿ ಜಲಾಶಯದ ನೀರಿನ ಮಟ್ಟ 125 ಅಡಿಗೆ ತಲುಪಿತ್ತು. ಪ್ರಸಕ್ತ ವರ್ಷ ಮಳೆಯಿಂದಲೇ ಜಲಾಶಯ ತುಂಬುವ ಹಂತತಲುಪಿದೆ.

ಹಾರನಕಣಿವೆ ಬಳಿಯ ಜಲಾಶಯದ ಕೋಡಿಯನ್ನು ದುರಸ್ತಿ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ನೀರು ಸರಾಗವಾಗಿ ಹರಿದುಹೋಗಲು ಅನುವಾಗುವಂತೆ ನದಿ ಪಾತ್ರವನ್ನು ಶುಚಿಗೊಳಿಸಲಾಗುತ್ತಿದೆ. ಜಾಲಿ, ಜೊಂಡು ತೆರವುಗೊಂಡರೆ ನದಿಯಲ್ಲಿ ನೀರು ಹರಿಯಲಿದೆ. ಹಿರಿಯೂರು, ಚಳ್ಳಕೆರೆ ತಾಲ್ಲೂಕಿನ ಮೂಲಕ ಗಡಿ ಭಾಗದ ಆಂಧ್ರಪ್ರದೇಶದ ಬೋರನತಿಪ್ಪೆ ಜಲಾಶಯ (ಬಿ.ಟಿ. ಜಲಾಶಯ) ಸೇರಲಿದೆ.

ಹಿನ್ನೀರಲ್ಲಿ ಮುಳುಗಿದ ಬೆಳೆ

ಮಾರಿಕಣಿವೆ ಬಳಿ ನಿರ್ಮಿಸಿದ ಅಣೆಕಟ್ಟೆಯ ಹಿನ್ನೀರು ಹೊಸದುರ್ಗ ತಾಲ್ಲೂಕಿನಲ್ಲಿ ಚಾಚಿಕೊಂಡಿದೆ. ಜಲಾಶಯ ಭರ್ತಿಯಾಗುವ ಹಂತ ತಲುಪುತ್ತಿದ್ದಂತೆಯೇ ಹಲವು ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಈಗಾಗಲೇ ರೈತರ ಕೃಷಿಭೂಮಿ ಮುಳುಗಡೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಭೋವಿಹಟ್ಟಿ, ಮುದ್ದಯ್ಯನಹಟ್ಟಿ, ರಾಮಜ್ಜನಹಳ್ಳಿ, ಬಂಟನಗವಿ, ಕರಿಲ್ಲಹಟ್ಟಿ, ಬೇವಿನಹಳ್ಳಿ, ಐಯ್ಯನಹಳ್ಳಿ, ಕೆರೆಕೋಡಿ ಹಟ್ಟಿ, ದಾಸಜ್ಜನ ಹಟ್ಟಿ, ಕೋಡಿಹಳ್ಳಿ, ಮಲ್ಲಾಪುರ, ನಾಗಯ್ಯನಹಟ್ಟಿ, ತಿಮ್ಮಯ್ಯನ ಹಟ್ಟಿ, ಅಂಚಿಬಾರಿಹಟ್ಟಿ, ಲಕ್ಕಿಹಳ್ಳಿ, ಅರೇಹಳ್ಳಿ, ತಿಪ್ಪೇನಹಳ್ಳಿ, ಅಜ್ಜಿಕಂಸಾಗರ, ಹೊಸೂರು ಭೋವಿಹಟ್ಟಿ ಸಮೀಪಕ್ಕೆ ನೀರು ಬಂದಿದೆ. ತೆಂಗು, ಅಡಿಕೆ, ರಾಗಿ, ಈರುಳ್ಳಿ, ಹತ್ತಿ, ತೊಗರಿ ಸೇರಿ ಹಲವು ಬೆಳೆಗಳು ಜಲಾವೃತಗೊಂಡಿವೆ. ಕೆಲ ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ.

ಜಲಾಶಯದ ಮಟ್ಟ 125 ಅಡಿ ತಲುಪಿದಾಗ ಹಿನ್ನೀರಿನ ಜಮೀನುಗಳಿಗೆ ನೀರು ನಿಲ್ಲುತ್ತದೆ. ಕಳೆದ ವರ್ಷ 930 ಎಕರೆ ಭೂಮಿ ಮುಳುಗಡೆಯಾಗಿತ್ತು. ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಮುಳುಗಡೆ ಭೂಮಿ ಹೆಚ್ಚಾಗಿದೆ.

.......

ಜಲಾಶಯ ಕೋಡಿಬೀಳುವುದಕ್ಕೆ ಸಂಬಂಧಿಸಿದಂತೆ ಕಥೆಗಳನ್ನು ಕೇಳಿದ್ದೆವು. ಇದನ್ನು ಕಣ್ತುಂಬಿಕೊಳ್ಳುವ ಕಾಲ ಕೂಡಿಬಂದಿದೆ. ಇಷ್ಟು ನೀರನ್ನು ಯಾವತ್ತೂ ನೋಡಿರಲಿಲ್ಲ.

-ಕೆ.ಆರ್‌.ತಿಪ್ಪೇಸ್ವಾಮಿ, ರೈತ ಭರಮಗಿರಿ, ಹಿರಿಯೂರು ತಾಲ್ಲೂಕು

......

ಸುಗಂಧರಾಜ, ಹತ್ತಿ, ಅಡಿಕೆ ಬೆಳೆಗೆ ನೀರು ನುಗ್ಗಿದೆ. ಗ್ರಾಮದ 35 ರೈತರ ಜಮೀನಿಗೆ ತೆರಳುವ ದಾರಿ ಮುಳುಗಡೆಯಾಗಿದೆ. ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಸಮಸ್ಯೆ ಬಿಗಡಾಯಿಸಲಿದೆ.

-ರಂಗಸ್ವಾಮಿ, ರೈತ ಅಂಚಿಬಾರಿಹಟ್ಟಿ, ಹೊಸದುರ್ಗ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.