
ಹಿರಿಯೂರು: ನಗರದ ವೇದಾವತಿ ಬಡಾವಣೆಯಲ್ಲಿ ಸಂತೆಯ ದಿನವಾದ ಬುಧವಾರ ಹಾಗೂ ಬೇರೆ ಬಡಾವಣೆಗಳಲ್ಲಿ ಗುರುವಾರ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ವರ್ತಕರಿಗೆ ದಂಡ ವಿಧಿಸಿದ ನಗರಸಭೆ ಆರೋಗ್ಯ ನಿರೀಕ್ಷಕರು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಸಂತೆಯಲ್ಲಿ ಸೊಪ್ಪು, ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದ ವರ್ತಕರು, ತಳ್ಳುಗಾಡಿಯಲ್ಲಿ ತಿಂಡಿ–ತಿನಿಸು ತಯಾರಿಸುವವರು ಗ್ರಾಹಕರಿಗೆ ನಿಷೇಧಿತ ಪ್ಲಾಸ್ಟಿಕ್ ಚೀಲಗಳಲ್ಲಿ ತಮ್ಮ ಸರಕನ್ನು ಕೊಡುತ್ತಿದ್ದುದು ಕಂಡು ಬಂದಿದ್ದರಿಂದ ಅಂದಾಜು 15 ವರ್ತಕರಿಗೆ 1,850 ದಂಡ ವಿಧಿಸಿದ್ದಾರೆ. ನಗರಸಭೆ ಅಧಿಕಾರಿಗಳು ದಂಡ ವಿಧಿಸುತ್ತಿರುವ ಸುದ್ದಿ ತಿಳಿದ ತಕ್ಷಣ ಬಹಳಷ್ಟು ವರ್ತಕರು ಪ್ಲಾಸ್ಟಿಕ್ ಚೀಲಗಳನ್ನು ಅಡಗಿಸಿಟ್ಟರು.
‘ಹಿಂದಿನ ಆರೇಳು ತಿಂಗಳಿಂದ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಗ್ರಾಹಕರು ಹಾಗೂ ವರ್ತಕರಿಗೆ ಜಾಗೃತಿ ಮೂಡಿಸುತ್ತಿದ್ದರೂ ಪ್ಲಾಸ್ಟಿಕ್ ಬಳಕೆ ನಿಲ್ಲದಿರುವುದು ಬೇಸರ ತರಿಸಿದೆ. ಸಂತೆಗೆ ಬರುವವರು ಸಣ್ಣಪುಟ್ಟ ವರ್ತಕರಾಗಿರುವ ಕಾರಣ ಎಚ್ಚರಿಕೆ ನೀಡಿ ಕನಿಷ್ಠ ಮೊತ್ತದ ದಂಡ ವಿಧಿಸಿದ್ದೇವೆ. ಮತ್ತೆ ಪ್ಲಾಸ್ಟಿಕ್ ಬಳಸಿದಲ್ಲಿ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಗ್ರಾಹಕರು ಸಂತೆಗೆ ಹೋಗುವಾಗ ಕೈಯಲ್ಲಿ ಬಟ್ಟೆಯ ಚೀಲ ಒಯ್ದರೆ ಸಮಸ್ಯೆ ಆಗದು. ವರ್ತಕರು ಪ್ಲಾಸ್ಟಿಕ್ ಚೀಲ ಕೊಡದೆ ಹೋದರೆ ನಂತರದ ವಾರ ಬರುವಾಗ ಗ್ರಾಹಕರು ಮನೆಯಿಂದ ಚೀಲ ತಂದೇ ತರುತ್ತಾರೆ’ ಎಂದು ನಗರಸಭೆ ಪೌರಾಯುಕ್ತ ಎ. ವಾಸಿಂ ಸುದ್ದಿಗಾರರಿಗೆ ತಿಳಿಸಿದರು.
ಇಡ್ಲಿಗೆ ಪ್ಲಾಸ್ಟಿಕ್ ಹಾಳೆ ಬಳಸುವುದು ನಿಷೇಧ: ‘ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಮೊದಲೆಲ್ಲ ಒದ್ದೆ ಬಟ್ಟೆಯ ಮೇಲೆ ಇಡ್ಲಿ ಹಿಟ್ಟು ಹೊಯ್ಯುತ್ತಿದ್ದರು. ಆದರೆ, ಈಚೆಗೆ ಶುಚಿಗೊಳಿಸಲು ಸುಲಭವಾಗುತ್ತದೆ ಎಂದು ಪ್ಲಾಸ್ಟಿಕ್ ಹಾಳೆಯನ್ನು ಬಳಸಲಾಗುತ್ತಿದೆ. ಇದು ಕ್ಯಾನ್ಸರ್‌ಗೆ ರಹದಾರಿ ಮಾಡಿಕೊಡುತ್ತದೆ. ಗ್ರಾಹಕರು ಪ್ಲಾಸ್ಟಿಕ್ ಹಾಳೆ ಬಳಸಿದ ಇಡ್ಲಿಯನ್ನು ನಿರಾಕರಿಸಬೇಕು. ಪ್ಲಾಸ್ಟಿಕ್ ಹಾಳೆ ಬಳಸಿದಲ್ಲಿ ಅಂತಹ ವರ್ತಕರ ತಳ್ಳು ಗಾಡಿಯನ್ನು ಸಾಮಗ್ರಿ ಸಮೇತ ವಶಪಡಿಸಿಕೊಂಡು ದಂಡ ವಿಧಿಸುತ್ತೇವೆ ಎಂದು ಎಚ್ಚರಿಸಿದ ಪೌರಾಯುಕ್ತರು, ಅಡುಗೆಗೆ ಟೇಸ್ಟಿಂಗ್ ಪೌಡರ್ ಬಳಸಿದಲ್ಲಿ ಕ್ರಮ ಜರುಗಿಸುತ್ತೇವೆ. ಸಾರ್ಜನಿಕರ ಆರೋಗ್ಯದ ಹೊಣೆ ಕೇವಲ ನಗರಸಭೆಯದ್ದು ಮಾತ್ರವಲ್ಲ, ವರ್ತಕರಿಗೂ ಸೇರಿದೆ’ ಎಂದು ಹೇಳಿದರು.
ದಾಳಿಯ ನೇತೃತ್ವವನ್ನು ನಗರಸಭೆಯ ಆರೋಗ್ಯ ನೀರಿಕ್ಷಕರಾದ ವೈ.ಎಸ್. ಸಂಧ್ಯಾ, ಅಶೋಕ್ ಕುಮಾರ್, ನಯಾಜ್ ಮತ್ತು ಸ್ವಚ್ಛತಾ ಕಾರ್ಮಿಕರು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.