ADVERTISEMENT

ತಂತ್ರಶಾಸ್ತ್ರದ ಬಗ್ಗೆ ತಪ್ಪುಗ್ರಹಿಕೆ ಹೆಚ್ಚು: ಡಾ.ಕೆ.ಎಸ್.ಕುಮಾರಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 10:55 IST
Last Updated 16 ಫೆಬ್ರುವರಿ 2020, 10:55 IST
ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ತಂತ್ರ ಸಾಹಿತ್ಯ – ಒಂದು ಸ್ಥೂಲಾವಲೋಕನ’ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಕುಮಾರಸ್ವಾಮಿ ಮಾತನಾಡಿದರು.
ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ತಂತ್ರ ಸಾಹಿತ್ಯ – ಒಂದು ಸ್ಥೂಲಾವಲೋಕನ’ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಕುಮಾರಸ್ವಾಮಿ ಮಾತನಾಡಿದರು.   

ಚಿತ್ರದುರ್ಗ: ತಂತ್ರವಿದ್ಯೆ, ತಂತ್ರಶಾಸ್ತ್ರವೇ ಮಾಟಮಂತ್ರ ಎಂಬ ತಪ್ಪು ಗ್ರಹಿಕೆ ಸಮಾಜದಲ್ಲಿ ಬೇರೂರಿದೆ. ಭಾರತೀಯ ಪಾರಂಪರಿಕ ವಿಜ್ಞಾನವೆಂದೇ ಭಾವಿಸಿರುವ ತಂತ್ರಶಾಸ್ತ್ರವನ್ನು ಪರಿಣಮಕಾರಿಯಾಗಿ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಐಎಂಎ ಸಭಾಂಗಣದಲ್ಲಿ ಇತಿಹಾಸ ಕೂಟ ಹಾಗೂ ರೇಣುಕಾ ಪ್ರಕಾಶನ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ತಂತ್ರ ಸಾಹಿತ್ಯ – ಒಂದು ಸ್ಥೂಲಾವಲೋಕನ’ ಕುರಿತು ಅವರು ಉಪನ್ಯಾಸ ನೀಡಿದರು.

‘ಸಾಂಖ್ಯಾ, ಅರ್ಥಶಾಸ್ತ್ರ, ಯೋಗ ಸೇರಿ ತಂತ್ರಶಾಸ್ತ್ರ ಸೃಷ್ಟಿಯಾಗಿದೆ ಎಂಬ ಮಾಹಿತಿ ಅಮರಕೋಶದಲ್ಲಿದೆ. ಪೂರ್ವ ಮೀಮಾಂಸೆಯನ್ನು ಪ್ರಥಮ ತಂತ್ರಶಾಸ್ತ್ರವೆಂದೂ ಕರೆಯಲಾಗುತ್ತದೆ. ನಾಲ್ಕನೇ ಶತಮಾನದಲ್ಲಿ ತಂತ್ರಶಾಸ್ತ್ರ ರಚನೆಯಾಗಿರುವ ಮಾಹಿತಿ ಲಭ್ಯವಿದೆ. ಕಾಶ್ಮೀರದಲ್ಲಿ 10ನೇ ಶತಮಾನದಲ್ಲಿ ಇದರ ಕುರುಹು ಪತ್ತೆಯಾಗಿವೆ. ಇದು ಅಥರ್ಣವೇದದಿಂದ ಪ್ರಾರಂಭವಾಗಿದೆ ಎಂಬ ವಾದವೂ ಇದೆ’ ಎಂದು ಹೇಳಿದರು.

ADVERTISEMENT

‘ಭಾರತದ ಪ್ರಾಚೀನ ಶಾಸ್ತ್ರಗಳಲ್ಲಿ ತಂತ್ರಶಾಸ್ತ್ರ ಪ್ರಮುಖವಾದದು ಎಂಬುದು ಬನ್ನಂಜೆ ಗೋವಿಂದಾಚಾರ್ಯ ಅವರ ಅಭಿಪ್ರಾಯ. ಭಾರತೀಯರ ಪಾರಂಪರಿಕ ಜ್ಞಾನವೆಂತಲೂ ಅನೇಕರು ಪ್ರತಿಪಾದಿಸುತ್ತಾರೆ. ಇದು ವಿಜ್ಞಾನಕ್ಕೆ ತುಂಬಾ ಸಮೀಪದಲ್ಲಿದೆ. ಇತಿಹಾಸಕಾರರು ಮತ್ತು ಜನಸಾಮಾನ್ಯರಿಗೆ ಈ ತಂತ್ರಶಾಸ್ತ್ರ ಅಪರಿಚಿತವಾಗಿಯೇ ಉಳಿದಿದೆ’ ಎಂದರು.

‘ತಂತ್ರ ಸಾಹಿತ್ಯ ಇಲ್ಲದೇ ಇದ್ದಿದ್ದರೆ ಸಾಹಿತ್ಯ ಲೋಕವೇ ಬರಡಾಗುತ್ತಿತ್ತು. ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗೂ ತಂತ್ರ ಸಾಹಿತ್ಯ ಅನುವಾದಗೊಂಡಿದೆ. ತಂತ್ರ ಎಂದರೆ ಮಗ್ಗದಿಂದ ತೆಗೆದ ತಂತ್ರಕ ಎಂಬ ವಿಶ್ಲೇಷಣೆಯೂ ಇದೆ. ತಂತ್ರ ಸಾಹಿತ್ಯದಲ್ಲಿ ನಾನಾ ಆಯಾಮಗಳಿವೆ. ಸಾಹಿತ್ಯ ಅಧ್ಯಯನ ಮಾಡಿದಾಗ ಮಾತ್ರ ಹಲವು ಅರ್ಥಗಳನ್ನು ಅರಿಯಲು ಸಾಧ್ಯವಿದೆ’ ಎಂದು ‍ಪ್ರತಿಪಾದಿಸಿದರು.

ಹಿರಿಯ ಸಂಶೋಧಕ ಪ್ರೊ.ಲಕ್ಷ್ಮಣ ತೆಲಗಾವಿ, ರೇಣುಕಾ ಪ್ರಕಾಶನದ ಎನ್.ಡಿ.ಶಿವಣ್ಣ, ಪತ್ರಕರ್ತ ಉಜ್ಜಿನಪ್ಪ, ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್, ಸಾಹಿತಿ ಎಸ್.ಆರ್.ಗುರುನಾಥ್, ಗೋಪಾಲಸ್ವಾಮಿ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.