ADVERTISEMENT

ನೀರಿನ ಮಿತ ಬಳಕೆ ಕೃಷಿಗೆ ಪೂರಕ

ಸಾಮಾಜಿಕ, ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಚಂದ್ರಕಾಂತ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 11:12 IST
Last Updated 19 ಜನವರಿ 2020, 11:12 IST
ಡಾ.ಎಂ.ಜಿ.ಚಂದ್ರಕಾಂತ್
ಡಾ.ಎಂ.ಜಿ.ಚಂದ್ರಕಾಂತ್   

ಚಿತ್ರದುರ್ಗ: ಕೃಷಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನೀರನ್ನು ಮಿತವಾಗಿ ಬಳಕೆ ಮಾಡುವ ಅಗತ್ಯವಿದೆ. ಇಲ್ಲವಾದರೆ ಕೃಷಿ ವಲಯ ಇನ್ನಷ್ಟು ವಿಪತ್ತಿಗೆ ಸಿಲುಕಲಿದೆ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಜಿ.ಚಂದ್ರಕಾಂತ್ ಎಚ್ಚರಿಕೆ ನೀಡಿದರು.

ಇಲ್ಲಿನ ಐಎಂಎ ಸಭಾಂಗಣದಲ್ಲಿ ಇತಿಹಾಸ ಕೂಟ, ಇತಿಹಾಸ ಸಂಸ್ಕೃತಿ ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಅವರು ‘ಅಂರ್ತಜಲ ನೀರಾವರಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು’ ಎಂಬ ಬಗ್ಗೆ ಮಾತನಾಡಿದರು.

‘ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಸುವುದರಿಂದ ಅಂರ್ತಜಲ ಬರಿದಾಗುತ್ತದೆ. ಸಕಲ ಜೀವ ಸಂಕುಲ ಹಾಗೂ ನೀರಾವರಿ ಮೇಲೆ ದುಷ್ಪರಿಣಾಮ ಬೀರಲಿದೆ. ಕೊಳವೆ ಬಾವಿ ಕೊರೆಸುವುದನ್ನು ತಡೆಯುವ ಉದ್ದೇಶದಿಂದ 2011ರಲ್ಲಿ ಅಂತರ್ಜಲ ಕಾಯ್ದೆ ಜಾರಿಗೆ ಬಂದಿದೆ. ಆದರೆ, ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ರೈತರು ಸ್ಪರ್ಧೆಗೆ ಇಳಿದವರಂತೆ ಕೊಳವೆ ಬಾವಿ ಕೊರೆಸಿದರೆ ಭೂಮಿಯಲ್ಲಿ ನೀರು ಇರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

‘ಕೃಷಿಗೆ ಹೊಸ ಕೊಳವೆ ಬಾವಿ ಕೊರೆಸುವ ಬದಲು ಇರುವ ಕೊಳವೆಬಾವಿಗಳನ್ನು ಮರುಪೂರಣ ಮಾಡುವ ಅಗತ್ಯವಿದೆ. ಕೊಳವೆ ಬಾವಿ ಮರುಪೂರಣಕ್ಕೆ ಸಂಬಂಧಿಸಿದಂತೆ ಜಲತಜ್ಞ ದೇವರಾಜ ರೆಡ್ಡಿ ಅವರ ಕಾರ್ಯ ಶ್ಲಾಘನೀಯ. ಬಹು ಬೆಳೆ ಪದ್ಧತಿ ಅನುಸರಿಸಿದರೆ ನೀರಿನ ಬಳಕೆಯನ್ನು ಕಡಿಮೆಗೊಳಿಸಬಹುದು. ರೈತರು ಕೃಷಿಯಿಂದ ವಿಮುಖರಾಗುವುದನ್ನು ತಡೆಯಬಹುದು’ ಎಂದು ಹೇಳಿದರು.

‘ರಾಸಾಯನಿಕ ಗೊಬ್ಬರ ಬಳಿಸಿ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಪ್ರತಿಯೊಬ್ಬರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಸಿರಿಧಾನ್ಯಗಳನ್ನು ಬೆಳೆಯಲು ರೈತರು ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಬರಲಿವೆ. ಸಿರಿಧಾನ್ಯ ಬೆಳೆಯುವುದರಿಂದ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ, ನಿರ್ದೇಶಕ ಪ್ರೊ.ಲಕ್ಷ್ಮಣ್‍ ತೆಲಗಾವಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷ ಎನ್.ಡಿ.ಶಿವಣ್ಣ, ಸಾಹಿತಿ ಬಿ.ಎಲ್.ವೇಣು, ಶ್ರೀಶೈಲಾರಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.