ADVERTISEMENT

ಗಣಪತಿ ಸ್ವಾಗತ ಕಮಾನು ನೆಲಸಮ

ರಸ್ತೆ ವಿಸ್ತರಣೆಗಾಗಿ ತೆರವು, ಹೊಸ ಕಮಾನು ನಿರ್ಮಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 7:14 IST
Last Updated 13 ನವೆಂಬರ್ 2022, 7:14 IST
ಹೊಳಲ್ಕೆರೆಯ ಮುಖ್ಯವೃತ್ತದ ಗಣಪತಿ ರಸ್ತೆಯಲ್ಲಿದ್ದ ಸ್ವಾಗತ ಕಮಾನನ್ನು ಶನಿವಾರ ನೆಲಸಮಗೊಳಿಸುತ್ತಿರುವ ದೃಶ್ಯ.
ಹೊಳಲ್ಕೆರೆಯ ಮುಖ್ಯವೃತ್ತದ ಗಣಪತಿ ರಸ್ತೆಯಲ್ಲಿದ್ದ ಸ್ವಾಗತ ಕಮಾನನ್ನು ಶನಿವಾರ ನೆಲಸಮಗೊಳಿಸುತ್ತಿರುವ ದೃಶ್ಯ.   

ಹೊಳಲ್ಕೆರೆ: ಪಟ್ಟಣದ ಶಿವಮೊಗ್ಗ-ಚಿತ್ರದುರ್ಗ ಮಾರ್ಗದ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ನಡೆಯುತ್ತಿದ್ದು, ಮುಖ್ಯವೃತ್ತದಲ್ಲಿದ್ದ ಗಣಪತಿ ದೇವಸ್ಥಾನದ ಸ್ವಾಗತ ಕಮಾನನ್ನು ಶನಿವಾರ ಪೊಲೀಸ್ ಭದ್ರತೆಯಲ್ಲಿ ನೆಲಸಮಗೊಳಿಸಲಾಯಿತು.

ಬಯಲು ಗಣಪತಿ ಮೂರ್ತಿ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ಪಟ್ಟಣದ ಮುಖ್ಯವೃತ್ತದಿಂದ ಉತ್ತರ ದಿಕ್ಕಿಗೆ ಸುಮಾರು 1 ಕಿ.ಮೀ. ಸಾಗಿದರೆ ಗಣಪತಿ ದೇವಾಲಯ ಸಿಗುತ್ತದೆ. ಮುಖ್ಯವೃತ್ತದಲ್ಲಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ 30 ವರ್ಷಗಳ ಹಿಂದೆ ಪಟ್ಟಣದ ಮರ್ಚೆಂಟ್ ಕ್ಲಬ್‌ನಿಂದ ಈ ಸ್ವಾಗತ ಕಮಾನು ನಿರ್ಮಿಸಲಾಗಿತ್ತು.

‘ಗಣಪತಿ ಆರ್ಚ್’ ಎಂದೇ ಪ್ರಸಿದ್ಧವಾಗಿದ್ದ ಈ ಸ್ಥಳ ಪಟ್ಟಣದ ಪ್ರಮುಖ ಭಾಗವಾಗಿತ್ತು. ‘ಪಟ್ಟಣದ ಜನರಿಗೆ ಗಣಪತಿ ಸ್ವಾಗತ ಕಮಾನಿನೊಂದಿಗೆ ಭಾವನಾತ್ಮಕ ಸಂಬಂಧ ಇತ್ತು. ಎಲ್ಲಿದ್ದೀಯ ಎಂದರೆ ‘ಗಣಪತಿ ಆರ್ಚ್’ ಹತ್ತಿರ ಇದ್ದೇನೆ ಎಂದು ಹೇಳುವುದು ಸಾಮಾನ್ಯವಾಗಿತ್ತು. ಸಂಜೆ ವೇಳೆ ಹಿರಿಯರು ಗೋಪುರದ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಕುಳಿತು ಮಸಾಲೆ ಮಂಡಕ್ಕಿ ತಿನ್ನುತ್ತ
ಹರಟೆ ಹೊಡೆಯುವುದು ಸಾಮಾನ್ಯವಾಗಿತ್ತು. ಬೇರೆ ಕಡೆಯಿಂದ ದೇವಸ್ಥಾನಕ್ಕೆ ಬರುವವರು ಈ ಸ್ವಾಗತ ಗೋಪುರ ನೋಡಿದ ತಕ್ಷಣ ದೇವಸ್ಥಾನದ ಮಾರ್ಗ ತಿಳಿಯುತ್ತಿತ್ತು. ಈಗ ಗೋಪುರ ಕೆಡವಿರುವುದರಿಂದ ಬೇಸರ ಆಗಿದೆ’ ಎನ್ನುತ್ತಾರೆ ಹಿರಿಯರಾದ ಶಿವಣ್ಣ.

ADVERTISEMENT

ಪಟ್ಟಣದ ನಾಗರಿಕರು ಸ್ವಾಗತ ಕಮಾನು ನೆಲಸಮಗೊಂಡ ವಿಡಿಯೊ ತುಣುಕನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿಕೊಳ್ಳುವ ಮೂಲಕ ಬೇಸರ ತೋಡಿಕೊಂಡರು.

‘ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕಿರಿದಾಗಿತ್ತು. ಆಗ ಆ ಭಾಗದ ಜನರ ವಿರೋಧ ಕಟ್ಟಿಕೊಂಡು ರಸ್ತೆ ವಿಸ್ತರಣೆ ಮಾಡಿಸಿದ್ದೆ. ಮೊದಲು ವಿರೋಧ ವ್ಯಕ್ತಪಡಿಸಿದವರೇ ಮುಂದೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ’ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.