ADVERTISEMENT

ಮೊಳಕಾಲ್ಮುರು: ‘ಪ್ರೀತಿಯ’ ಪಾರಿವಾಳ ಹಾರಿ ಬಂತೊ ಗೆಳೆಯಾ!

21 ದಿನದಲ್ಲಿ 900 ಕಿ.ಮೀ. ಕ್ರಮಿಸಿ‌ ತವರಿಗೆ ಮರಳಿದ ಪಕ್ಷಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 23 ಜನವರಿ 2026, 7:00 IST
Last Updated 23 ಜನವರಿ 2026, 7:00 IST
ಶಬರಿಮಲೆಯಿಂದ ಹಾರಿಬಂದ ಪಾಳಿವಾಳ ಮದಕರಿಯ ಜತೆ ಓ.ರಾಜು
ಶಬರಿಮಲೆಯಿಂದ ಹಾರಿಬಂದ ಪಾಳಿವಾಳ ಮದಕರಿಯ ಜತೆ ಓ.ರಾಜು   

ಮೊಳಕಾಲ್ಮುರು: ದಿಕ್ಕನ್ನು ನಿಖರವಾಗಿ ಗುರುತಿಸುವುದು, ದೀರ್ಘಾವಧಿ ನೆನೆಪಿನ ಶಕ್ತಿ ಹಾಗೂ ತೀಕ್ಷ್ಣವಾದ ದೃಷ್ಟಿ ಸಾಮರ್ಥ್ಯಕ್ಕೆ ಪಾರಿವಾಳಗಳು ಹೆಸರುವಾಸಿ. ಅಂತೆಯೇ ಪುರಾತನ ಕಾಲದಲ್ಲಿ ಪಾರಿವಾಳಗಳನ್ನು ಊರೂರುಗಳ ನಡುವೆ ಸಂದೇಶ ವಾಹಕಗಳನ್ನಾಗಿ ಬಳಸಲಾಗುತ್ತಿತ್ತು. ಗೂಢಚರ್ಯೆ ಕೆಲಸಕ್ಕೂ ಕೆಲವು ಸಾಮ್ರಾಜ್ಯಗಳಲ್ಲಿ ಪಾರಿವಾಳಗಳನ್ನು ಬಳಸಿಕೊಂಡಿದ್ದಾಗಿ ಇತಿಹಾಸ ಹೇಳುತ್ತದೆ. ಪತ್ರ ರವಾನಿಸುವ ‘ಅಂಚೆಯಣ್ಣ’ನ ಕೆಲಸವನ್ನೂ ಪಾರಿವಾಳಗಳು ಮಾಡಿದ್ದಿದೆ.

ಜೂಜಾಟ ಮತ್ತು ಕ್ರೀಡೆಯಲ್ಲೂ ಪಾರಿವಾಳಗಳನ್ನು ಬಳಸಲಾಗುತ್ತದೆ. ಬೇರೆ ಊರಲ್ಲಿ ಹಾರಿ ಬಿಟ್ಟ ಪಾರಿವಾಳ ತನ್ನ ಆಗಾಧ ನೆನಪಿನ ಶಕ್ತಿಯನ್ನಾಧರಿಸಿ ಸಾಕಿದ ಯಜಮಾನನ ಮನೆಗವರೆಗೂ ಮರಳಿದ ನಿದರ್ಶನಗಳಿವೆ. ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳವಾರಹಳ್ಳಿಯಲ್ಲಿ ಸಾಕಿದ ಪಾರಿವಾಳವೊಂದು 900 ಕಿ.ಮೀ. ದೂರದಿಂದ ಮರಳಿ ಊರಿಗೆ ಬಂದು ಅಚ್ಚರಿಯ ಸಾಲಿಗೆ ಸೇರಿದೆ.

ಗ್ರಾಮದ ಓ. ರಾಜು ಎಂಬವರಿಗೆ ಪಾರಿವಾಳ ಸಾಕುವ ಪ್ರವೃತ್ತಿ ಇದೆ. ಅವರು ಸಾಕಿರುವ ‘ಮದಕರಿ’ ಹೆಸರಿನ ಪಾರಿವಾಳವನ್ನು ಗ್ರಾಮದಿಂದ ಶಬರಿಮಲೆ ಯಾತ್ರೆಗೆ ಹೋಗಿದ್ದ ಯಾತ್ರಾರ್ಥಿಗಳ ಕೈಗೆ ನೀಡಿದ್ದರು. ಜತೆಗೆ ಗ್ರಾಮದ ಓಬಣ್ಣ ಎಂಬವರೂ ತಮ್ಮ ಪಾರಿವಾಳವೊಂದನ್ನೂ ನೀಡಿದ್ದರು. ಎರಡೂ ಪಾರಿವಾಳಗಳನ್ನು ಶಬರಿಮಲೆಯಲ್ಲಿ ಬಿಡುವಂತೆ ಹೇಳಿದ್ದರು.

ADVERTISEMENT

ಅದರಂತೆ ಡಿ. 31ರಂದು ಮಧ್ಯಾಹ್ನ ಕೇರಳದಲ್ಲಿರುವ ಶಬರಿಮಲೆಯ ದಟ್ಟಾರಣ್ಯದಿಂದ ಆ ಎರಡೂ ಪಾರಿವಾಳಗಳನ್ನು ಯಾತ್ರಾರ್ಥಿಗಳು ಏಕಕಾಲದಲ್ಲಿ ಹಾರಿಬಿಟ್ಟಿದ್ದರು. ರಾಜು ಅವರ ಪಾರಿವಾಳ ಗುರುವಾರ (ಜ. 21) ಮಧ್ಯಾಹ್ನ 1.30ರ ವೇಳೆಗೆ ಸುರಕ್ಷಿತವಾಗಿ ವಾಪಸ್‌ ಊರಿಗೆ ಮರಳಿದೆ. ಓಬಣ್ಣ ಅವರ ಪಾರಿವಾಳಕ್ಕಾಗಿ ಎದುರು ನೋಡಲಾಗುತ್ತಿದೆ. ಅಂದಾಜು 900 ಕಿ.ಮೀ ದೂರದಿಂದ 1 ಪಾರಿವಾಳ ವಾಪಸ್‌ ಬಂದಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

‘ಪಾರಿವಾಳಗಳನ್ನು ಹಾರಿ ಬಿಟ್ಟಾಗ ಹದ್ದು, ಗಿಡುಗಗಳ ಕಣ್ಣು ತಪ್ಪಿಸಿಕೊಂಡು ವಾಪಸ್‌ ಬರುವುದು ಕಷ್ಟಕರ. ಅನಾರೋಗ್ಯ ಎದುರಾಗುವ ಸಾಧ್ಯತೆಯೂ ಇರುತ್ತದೆ. ಅಷ್ಟೊಂದು ದೂರದಿಂದ ನಾನು ಸಾಕಿರುವ ಪಾರಿವಾಳ ವಾಪಸ್‌ ಬಂದಿರುವುದು ಸಂತಸ ತಂದಿದೆ’ ಎಂದು ‘ಮದಕರಿ’ ಪಾರಿವಾಳದ ಮಾಲೀಕ ಓ.ರಾಜು ತಿಳಿಸಿದರು.

ಅಪರೂಪ ಅಚ್ಚರಿ..

‘ಪಾರಿವಾಳವೊಂದು 900 ಕಿ.ಮೀ ದೂರ ಕ್ರಮಿಸಿ ಮಾಲೀಕರ ಮನೆಗೆ ಮರಳಿರುವುದು ನಿಜಕ್ಕೂ ಅಚ್ಚರಿ ಹಾಗೂ ಅಪರೂಪದ ಸಂಗತಿ’ ಎಂದು ದಾವಣಗೆರೆಯ ಪಕ್ಷಿ ತಜ್ಞ ಶಿಶುಪಾಲ ಹೇಳಿದರು. ‘ಪಾರಿವಾಳಗಳ ಕಣ್ಣು ಮತ್ತು ಮೂಗಿನ ಮಧ್ಯ ಭಾಗದಲ್ಲಿ ಅಯಸ್ಕಾಂತೀಯ ಶಕ್ತಿ ಇರುತ್ತದೆ. ಅದರ ನೆರವಿನಿಂದ ಅವು ದಿಕ್ಕನ್ನು ಸರಿಯಾಗಿ ಗುರುತಿಸಬಲ್ಲವು. ಜೊತೆಗೆ ಅವು ಅಗಾಧ ನೆನ‍ಪಿನ ಶಕ್ತಿಯನ್ನೂ ಹೊಂದಿರುತ್ತವೆ’ ಎಂದು ತಿಳಿಸಿದರು. ‘ತಾವು ಸಾಗುವ ಹಾದಿಯಲ್ಲಿನ ಗಿರಿ–ಶಿಖರಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯವೂ ಪಾರಿವಾಳಗಳಲ್ಲಿ ಇರುತ್ತದೆ. ವಾಹನವೊಂದರಲ್ಲಿ ತೆಗೆದುಕೊಂಡು ಹೋಗಿ ಅಪರಿಚಿತ ಸ್ಥಳದಲ್ಲಿ ಹಾರಿ ಬಿಟ್ಟಾಗ ಅವು ಆರಂಭದಲ್ಲಿ ದಾರಿ ತಪ್ಪುವುದು ಸಹಜ. ಆದರೂ ಅವು ಅಲ್ಲಲ್ಲಿ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರಿಸುತ್ತವೆ. ಸಾಕಷ್ಟು ದಿನಗಳ ನಂತರ ತಮಗೆ ಪರಿಚಿತವಾದ ಸ್ಥಳಕ್ಕೆ ಬಂದು ತಲುಪುತ್ತವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.