ADVERTISEMENT

ಕಷ್ಟ ನಿವಾರಣೆಗೆ ಹೊರಬೀಡು ಮೊರೆಹೋದ ಜನ

ಹೊಸದುರ್ಗ ತಾಲ್ಲೂಕಿನ ಬೋಕಿಕೆರೆ ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 3:02 IST
Last Updated 17 ಸೆಪ್ಟೆಂಬರ್ 2021, 3:02 IST
ಹೊಸದುರ್ಗ ತಾಲ್ಲೂಕಿನ ಬೋಕಿಕೆರೆ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿ ಗುರುವಾರ ಹೊರಬೀಡು ಆಚರಣೆ ಮಾಡಿದರು.
ಹೊಸದುರ್ಗ ತಾಲ್ಲೂಕಿನ ಬೋಕಿಕೆರೆ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿ ಗುರುವಾರ ಹೊರಬೀಡು ಆಚರಣೆ ಮಾಡಿದರು.   

ಬೋಕಿಕೆರೆ (ಹೊಸದುರ್ಗ): ತಾಲ್ಲೂಕಿನ ಬೋಕಿಕೆರೆ ಗ್ರಾಮಸ್ಥರು ತಮ್ಮ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿ ಗುರುವಾರ ಗ್ರಾಮದ ಹೊರವಲಯದಲ್ಲಿ ಹೊರಬೀಡು ಆಚರಣೆ ಮಾಡಿದರು.

ಈಚೆಗೆ ಗ್ರಾಮದ ಮುಖಂಡರೊಬ್ಬರ ಲಕ್ಷಾಂತರ ರೂಪಾಯಿ ವೆಚ್ಚದ ಎರಡು ಹೋರಿ (ಎತ್ತು), ಇನ್ನಿತರ ರೈತರ ಐದಾರು ಎಮ್ಮೆ, ಮೇಕೆ ಹಾಗೂ ಕುರಿಗಳು ಇದ್ದಕ್ಕಿದಂತೆ ಮೃತಪಟ್ಟಿದ್ದರಿಂದ ಆಘಾತಕ್ಕೊಳಗಾದ ಗ್ರಾಮಸ್ಥರಿಗೆ ದಿಕ್ಕು ತೋಚದಂತಾಯಿತು. ಒಂದು ಎಮ್ಮೆ ಜಮೀನಿನಲ್ಲಿ ಮೇವು ತಿಂದು ಸಂಜೆ ಮನೆಗೆ ಬಂದು ಮುಸುರೆ ಕುಡಿದು ನಂತರದಲ್ಲಿ ಊರ ಬಾಗಿಲಿಗೆ ಬಂದು ಏಕಾಏಕಿ ಒದ್ದಾಡಿ ಮೃತಪಟ್ಟಿದ್ದರಿಂದ ಮತ್ತಷ್ಟು ಆತಂಕ
ಹೆಚ್ಚಾಯಿತು.

ಎಷ್ಟೊಂದು ಜಾನುವಾರು ಪ್ರಾಣಹಾನಿಯಾದ ಘಟನೆ ಐದಾರು ದಿನಗಳೊಳಗೆ ನಡೆದಿತ್ತು. ಪಶು ವೈದ್ಯರಿಂದ ಉಳಿದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಿದರೂ ಗ್ರಾಮಸ್ಥರಿಗೆ ಸಮಾಧಾನ ಆಗಲಿಲ್ಲ. ಹಾಗಾಗಿ, ಕಷ್ಟ ನಿವಾರಣೆಗೆ ಪ್ರಾರ್ಥಿಸಿ ಗ್ರಾಮದ ಆಂಜನೇಯಸ್ವಾಮಿ, ಕರಿಯಮ್ಮ, ದೊಡ್ಡಮ್ಮ, ಭೂತಪ್ಪ, ಬೀರಲಿಂಗೇಶ್ವರಸ್ವಾಮಿ ದೇವರ ಮೊರೆ ಹೋದವು. ದೇವರ ಅಪ್ಪಣೆ ಮೇರೆಗೆ ಈ ಹೊರಬೀಡು ವಿಶಿಷ್ಟ ಆಚರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಮದ ಬಸವರಾಜು, ಜನಾರ್ದನ್‌.

ADVERTISEMENT

ಬೆಳಿಗ್ಗೆಯೇ ಗ್ರಾಮದ ಸುಮಾರು 350 ಮನೆಗಳಲ್ಲಿದ್ದ ಜನರು ಗಂಟುಮೂಟೆ ಕಟ್ಟಿಕೊಂಡು ಮನೆಗಳಿಗೆ ಬೀಗ ಹಾಕಿಕೊಂಡು, ಸಾಕು ಪ್ರಾಣಿ ಸಮೇತ ಗ್ರಾಮದ ಹೊರಗೆ ಬಂದು ಬೀಡು ಬಿಟ್ಟರು. ಸಿಹಿ ಅಡುಗೆ ಮಾಡಿ ಹಸಿರು ಗಿಡಕ್ಕೆ ಎಡೆ ಹಾಕಿದರು. ಗ್ರಾಮದ ಮುಖಂಡರು ಗ್ರಾಮದ ಪ್ರಮುಖ ಬೀದಿ ಹಾಗೂ ದೇವರು ಸಂಚರಿಸುವ ಜಾಗ ಸ್ವಚ್ಛಗೊಳಿಸಿದರು. ದೇವರ ಸಮ್ಮುಖದಲ್ಲಿ ಊರು ಬಾಗಿಲಿಗೆ ದೊಡ್ಡೆಡೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಸುತ್ತಲೂ ನಿಂಬೆಹಣ್ಣು ಕೊಯ್ದು, ಚರಗ ಹಾಕಿದರು.

ಈ ಎಲ್ಲ ಪೂಜಾ ಕಾರ್ಯ
ಮುಗಿದ ಬಳಿಕ ದೇವರು ಗ್ರಾಮಸ್ಥರು ಹೊರಬೀಡು ಬಿಟ್ಟಿದ್ದ ಜಾಗಕ್ಕೆ ಬಂದು ಸಂಜೆ ಹೊತ್ತಿಗೆ ಜನರನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿತ್ತು. ದೇವರು ಊರು ಒಳಗೆ ಅಕ್ಕಿಕಾಳು ಎಸೆದ ನಂತರದಲ್ಲಿ ಜನರು ತಮ್ಮ ಮನೆಯೊಳಗೆ ಪ್ರವೇಶ
ಮಾಡಿದರು.

20 ವರ್ಷಗಳ ಬಳಿಕ ಆಚರಣೆ

ಸುಮಾರು 20 ವರ್ಷಗಳ ಹಿಂದೆ ಇದ್ದಕ್ಕಿದಂತೆ ಗ್ರಾಮದ ಜನರಿಗೆ ವಾಂತಿ, ಭೇದಿ ಕಾಣಿಸಿತ್ತು. ಆಸ್ಪತ್ರೆಗೆ ತೋರಿಸಿದರೂ ಚೇತರಿಕೆ ಆಗದೇ ಸುಮಾರು 11 ಜನ ಮೃತಪಟ್ಟಿದ್ದರು. ಆಗಲೂ ದೇವರ ಅಪ್ಪಣೆ ಮೇರೆಗೆ ಹೊರಬೀಡು ಆಚರಣೆ ಮಾಡಿದ ಮೇಲೆ ಜನರಿಗೆ ವಾಂತಿ, ಭೇದಿ ಆಗುವುದು ನಿಂತಿತ್ತು. ನಂತರದ ದಿನಗಳಲ್ಲಿ ಗ್ರಾಮದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನಿರ್ಮಾಣವಾಯಿತು ಎಂದು ಗ್ರಾಮದ ಹಿರಿಯರು ಹೇಳುತ್ತಿದ್ದಾರೆ. ಈ ನಂಬಿಕೆಯ ಕಾರಣ ಜನ ಹಾಗೂ ಜಾನುವಾರು ಹಿತ ಕಾಪಾಡುವ ಉದ್ದೇಶದಿಂದ 20 ವರ್ಷಗಳ ಬಳಿಕ ಹೊರಬೀಡು ಆಚರಿಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಮರಣೋತ್ತರ ಪರೀಕ್ಷೆ ಅವಶ್ಯ

ಕಲುಷಿತ ಆಹಾರ ಸೇವನೆಯಿಂದ ಜಾನುವಾರು ಮೃತಪಟ್ಟಿರಬಹುದು. ಎತ್ತುಗಳು ಇದ್ದಕ್ಕಿದ್ದಂತೆ ಮೃತಪಟ್ಟ ತಕ್ಷಣ ನಮಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದರೆ ಸಾವಿಗೆ ಕಾರಣ ಏನೆಂಬುದು ತಿಳಿಯಬಹುದಿತ್ತು. ಆದರೆ, ನಮ್ಮ ಇಲಾಖೆ ವೈದ್ಯರು ಗ್ರಾಮಕ್ಕೆ ಹೋಗುವ ಹೊತ್ತಿಗೆ ಗ್ರಾಮಸ್ಥರು ಮೃತಪಟ್ಟಿದ್ದ ಎತ್ತುಗಳನ್ನು ಭೂಮಿಯಲ್ಲಿ ಹೂತಿದ್ದರು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್‌.ಎಂ.ಕಿರಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.