ADVERTISEMENT

ಡಿ.ಸಿ ಕಚೇರಿ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಜಾಗ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸಭೆ; ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್‌, ಶಾಸಕರು, ಅಧಿಕಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:47 IST
Last Updated 20 ಡಿಸೆಂಬರ್ 2025, 6:47 IST
ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಯಿತು
ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಯಿತು   

ಚಿತ್ರದುರ್ಗ: ನಗರ ಹೊರವಲಯದ ಕುಂಚಿಗನಾಳ್ ಕಣಿವೆ ಬಳಿ ಹೊಸದಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನ ಕಟ್ಟಡವನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೊಸ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಜಾಗ ಬಳಸಿಕೊಳ್ಳುವ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.

ಈ ಸಂಬಂಧ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದು ವಿಸ್ತ್ರತವಾಗಿ ಚರ್ಚೆ ನಡೆಸಿದ್ದಾರೆ. ಈಗಿನ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತಲಿನ ಸರ್ಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ಹೊಸ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವ ಕುರಿತಂತೆ ಮಾತುಕತೆ ನಡೆಸಲಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೇರಿದಂತೆ ಅಧಿಕಾರಿಗಳ ತಂಡ ಬೆಳಗಾವಿಗೆ ತೆರಳಿತ್ತು.

ಸಭೆಯಲ್ಲಿ ಸಚಿವ ಡಿ.ಸುಧಾಕರ್‌ ಮಾತನಾಡಿ ‘ಕುಂಚಿಗನಾಳ್‌ ಬಳಿಯ ಕಟ್ಟಡವನ್ನು ವೈದ್ಯಕೀಯ ಕಾಲೇಜಿಗೆ ನೀಡುವ ಪ್ರಸ್ತಾವನೆ ಸರ್ಕಾರದ ಅನುಮೋದನೆ ಹಂತದಲ್ಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದ ಮಧ್ಯ ಭಾಗದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವುದು ನಮ್ಮ ಆದ್ಯತೆಯಾಗಿದೆ. ಜಿಲ್ಲಾಧಿಕಾರಿ ನಿವಾಸ, ಜಿಲ್ಲಾ ಪಂಚಾಯಿತಿ ಸಿಇಒ ನಿವಾಸ ಮತ್ತು ಸುತ್ತಮುತ್ತಲಿನ ಸ್ಥಳದಲ್ಲಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಸಾಕಷ್ಟು ಜಾಗವಿದೆ, ವಿವಿಧ ಇಲಾಖೆಗಳ ಕಚೇರಿಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ವಿಸ್ತ್ರತ ಯೋಜನೆ ಸಿದ್ಧಪಡಿಸಬಹುದು. ಚಿತ್ರದುರ್ಗ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಹೊಂದಿಕೊಂಡಿರುವ ತೋಟಗಾರಿಕೆ ಇಲಾಖೆಯ ಸ್ಥಳವನ್ನೂ ಜಿಲ್ಲಾಡಳಿತ ಭವನ ಕಾಮಗಾರಿಗೆ ಬಳಸಿಕೊಳ್ಳಬಹುದು. ತೋಟಗಾರಿಕೆ ಇಲಾಖೆಯ 6 ಎಕರೆ ಸ್ಥಳವನ್ನು ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ನೀಡಿದರೆ ಸಾಕಷ್ಟು ಜಾಗ ದೊರೆಯಲಿದೆ. ಜೊತೆಗೆ ಬೇರೆ ಬೇರೆ ಇಲಾಖೆಗಳ ಜಾಗವನ್ನೂ ಸದ್ಬಳಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು. 

‘ತೋಟಗಾರಿಕೆ ಇಲಾಖೆಗೆ ಈಗಿನ ಸ್ಥಳದ ಬದಲಾಗಿ ಬೇರೆ ಜಾಗದಲ್ಲಿ ಜಮೀನು ನೀಡಿ ಮೂಲ ಸೌಕರ್ಯ ಒದಗಿಸಬಹುದು. ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ ಕಚೇರಿಗೂ ಸ್ಥಳಾವಕಾಶ ನೀಡಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಹಾಗೂ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲಾಗುವುದು’ ಎಂದರು.

ತೋಟಗಾರಿಕೆ ಇಲಾಖೆ ನಿರ್ದೇಶಕ ಗಿರೀಶ್ ಮಾತನಾಡಿ ‘ಇಲಾಖೆಗೆ ಸೇರಿದ ಸ್ಥಳದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ನೀಡುವ ಬಗ್ಗೆ ಸರ್ಕಾರದ ಕಾರ್ಯದರ್ಶಿ ಜತೆ ಚರ್ಚಿಸಲಾಗುವುದು. ಸರ್ಕಾರಕ್ಕೆ ಸೇರಿದ ಸ್ಥಳವನ್ನು ನೀಡುವ ಅಧಿಕಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಗೆ ಇದೆ. ಇದಕ್ಕೆ ಜಿಲ್ಲಾಧಿಕಾರಿಗಳಿಂದ ಸೂಕ್ತ ಪ್ರಸ್ತಾವ ಸಲ್ಲಿಕೆಯಾಗಬೇಕಿದೆ. ಸಾರ್ವಜನಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ‘ಕುಂಚಿಗನಾಳ್‌ ಕಣಿವೆಯಲ್ಲಿರುವ ಕಟ್ಟಡವನ್ನು ವೈದ್ಯಕೀಯ ಕಾಲೇಜಿಗೆ ನೀಡುವ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಅದೇ ರೀತಿ ತೋಟಗಾರಿಕೆ ಇಲಾಖೆ ಜಾಗವನ್ನು ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಅಗತ್ಯ ದಾಖಲಾತಿಗಳೊಂದಿಗೆ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗೆ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಎಸ್‌.ಆಕಾಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.