
ಹೊಸದುರ್ಗ: ಪಟ್ಟಣದ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳ ನಿರ್ವಹಣೆಗಾಗಿ ಸರ್ಕಾರದಿಂದ ₹ 22 ಕೋಟಿ ಮಂಜೂರು ಮಾಡಲಾಗಿದೆ. ಮುಂದಿನ 8 ತಿಂಗಳೊಳಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸಿ ಹೊಸದುರ್ಗ ಪಟ್ಟಣವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ಪಟ್ಟಣದ ಗಾಂಧಿ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹೊಸದುರ್ಗ ಪಟ್ಟಣದ ಅಭಿವೃದ್ಧಿಗಾಗಿ ವಿವಿಧ ಅನುದಾನಗಳಲ್ಲಿ ಒಟ್ಟು ₹ 22 ಕೋಟಿ ಮೊತ್ತ ಮೀಸಲಿಡಲಾಗಿದೆ. ಶಾಸಕರ ಅನುದಾನ ₹ 4.12 ಕೋಟಿ ವೆಚ್ಚದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಹಾಗೂ ಹಿರಿಯೂರು ವೃತ್ತದಿಂದ ಅರಣ್ಯ ಇಲಾಖೆ ಮುಖಾಂತರ ಹಾಲುರಾಮೇಶ್ವರ ರಸ್ತೆಯ ಸರ್ಕಲ್ ವರೆಗೆ ರಸ್ತೆ ಅಗಲೀಕರಣ, ರಸ್ತೆ ವಿಭಜಕ ಹಾಗೂ ವಿದ್ಯುತ್ ದೀಪಗಳ ಅಳವಡಿಕೆಯ ಕಾಮಗಾರಿ ಮಾಡಲಾಗುವುದು. ಅರಣ್ಯ ಇಲಾಖೆ ಬಳಿ ಇರುವ ಸೇತುವೆಯನ್ನು ಕೆಡವಿ 18 ಮೀಟರ್ ಅಗಲದ ನೂತನ ಸೇತುವೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಕೆಪಿಸಿಸಿ ಸದಸ್ಯ ಅಲ್ತಾಫ್ ಪಾಷಾ, ಮಹಿಳಾ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷೆ ದಿಪೀಕಾ ಸತೀಶ್, ಪುರಸಭೆ ಮುಖ್ಯಾಧಿಕಾರಿ ನಾಗಭೂಷಣ್ ಎನ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಲೋಕೋಪಯೋಗಿ ಇಲಾಖೆ ಎಇಇ ಮಂಜುನಾಥ್ ಬಿ, ಮುಖಂಡರಾದ ಆಗ್ರೋ ಶಿವಣ್ಣ, ಗೋ ತಿಪ್ಪೇಶ್, ಸುಮಂಗಲಾ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.