ADVERTISEMENT

‘ಶಿಕ್ಷಕರ ಉಡಾಫೆಯಿಂದ ಫಲಿತಾಂಶ ಕಳಪೆ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:53 IST
Last Updated 8 ಮೇ 2025, 15:53 IST
ಹೊಸದುರ್ಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು
ಹೊಸದುರ್ಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು   

ಹೊಸದುರ್ಗ: ‘ಸರ್ಕಾರಿ, ಅನುದಾನಿತ ಮತ್ತು ವಸತಿ ಶಾಲೆಯ ಶಿಕ್ಷಕರು ಸರ್ಕಾರದಿಂದ ವೇತನ ತೆಗೆದುಕೊಳ್ಳುವುದಿಲ್ಲವೇ? ಖಾಸಗಿ ಶಾಲೆಗಳಿಗಿಂತ ಫಲಿತಾಂಶ ಕಡಿಮೆ ಬಂದಿರುವುದೇಕೆ? ನಿಮ್ಮ ಉಡಾಫೆ ಮನಸ್ಥಿತಿಯಿಂದಲೇ ಫಲಿತಾಂಶ ಕಳಪೆಯಾಗಿದೆ’ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಉಡಾಫೆ ಉತ್ತರಗಳನ್ನು ಕೊಡುವುದು ಬಿಟ್ಟು, ಮಕ್ಕಳಿಗೆ ಉತ್ತಮವಾಗಿ ಪಾಠ ಹೇಳಿಕೊಡಿ. ಪ್ರಸಕ್ತ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಕಳಪೆಯಾಗಿದೆ. ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ಸರ್ಕಾರದ ಆದೇಶಗಳನ್ನು ಪಾಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ಮತ್ತು ಪಾಲಕರು ಸರ್ಕಾರಿ ಶಾಲೆಗಳಿಗೆ ಬರುವಂತಹ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸರ್ಕಾರ ಶಿಕ್ಷಣಕ್ಕಾಗಿ ನೂರಾರು ಕೋಟಿ ರೂಪಾಯಿ ವ್ಯಯಿಸುತ್ತಿದೆ. ಸಮಯಕ್ಕೆ ಸರಿಯಾಗಿ ವೇತನ ಕೊಡುತ್ತಿದೆ. ಸರ್ಕಾರಿ ಶಾಲೆಗಳ ಪ್ರಗತಿಗೆ ಎಷ್ಟೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿದರೂ ಫಲಿತಾಂಶ ಸುಧಾರಣೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಂದೆ-ತಾಯಿಗಳು ತಮ್ಮ ಮಕ್ಕಳನ್ನ ಶಾಲಾ- ಕಾಲೇಜುಗಳಿಗೆ ಕಳುಹಿಸಿ ಹಿಂದಿರುಗಿ ಹೇಗೆ ಬರುತ್ತಾರೋ ಎಂಬ ಭಯದಲ್ಲಿರುವಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ. ಪೊಲೀಸ್ ಠಾಣೆಗಳಲ್ಲಿ ನಿತ್ಯವೂ 10ರಿಂದ 15 ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ದೂರುಗಳೇ ಇರುತ್ತವೆ. ಪ್ರೌಢ ವ್ಯವಸ್ಥೆ ನಿಮ್ಮ ಬದುಕನ್ನು ರೂಪಿಸಬಲ್ಲದು, ಹಾಗೆಯೇ ಹಾಳು ಮಾಡಬಲ್ಲದು. ಯುವಕ ಮತ್ತು ಯುವತಿಯರು ಬಹಳ ಎಚ್ಚರಿಕೆಯಿಂದಿದ್ದು, ಪಾಲಕರಿಗೆ ಒಳ್ಳೆಯ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.

‘ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು 2 ಬಾರಿ ಅವಕಾಶವಿದೆ. ಕಳೆದ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳ ಶುಲ್ಕವನ್ನು ನಾವೇ ಕಟ್ಟಿ ಪರೀಕ್ಷೆ ಬರೆಸುತ್ತೇವೆ. ಅಂತಹ ವಿದ್ಯಾರ್ಥಿಗಳು ಈಗಲೂ ಪರೀಕ್ಷೆ ಕಟ್ಟಲು ಅವಕಾಶವಿದೆ’ ಎಂದು ಬಿಇಒ ಸೈಯದ್ ಮೋಸಿನ್ ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್, ಯುವಜನ ಕ್ರೀಡಾಧಿಕಾರಿ ಮಹಾಂತೇಶ್, ಇಸಿಒ ಶಶಿಧರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಪಾಷಾ, ಪ್ರಾಂಶುಪಾಲರಾದ ಗುರುಮೂರ್ತಿ, ನಾಗೇಂದ್ರಪ್ಪ, ನೋಡಲ್ ಅಧಿಕಾರಿ ಕೆಂಚಪ್ಪ, ನೌಕರರ ಸಂಘದ ದಿವಾಕರ್, ಮುಖಂಡರಾದ ಆಗ್ರೋ ಶಿವಣ್ಣ, ಶಾಂತಪ್ಪ, ದೀಪಿಕಾ ಸತೀಶ್ ಮತ್ತು ಮಹಮದ್ ಇಸ್ಮಾಯಿಲ್ ಸೇರಿದಂತೆ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.