ಹೊಸದುರ್ಗ: ‘ಬುಡಕಟ್ಟು ಜನರ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕೆನ್ನುವ ಆಶಯವಿದೆ. ಹಾಗಾಗಿ ತರಬೇತುದಾರರು ಹಿಂದುಳಿದಿರುವ ಜನರನ್ನು ಗುರುತಿಸಿ, ಶಿಸ್ತುಬದ್ಧವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸೋಣ’ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.
ತಾಲ್ಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಈಚೆಗೆ ನಡೆದ ಆದಿ ಕರ್ಮಯೋಗಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬುಡಕಟ್ಟು ವರ್ಗಗಳನ್ನು ಸಮುದಾಯದ ಮುಖ್ಯ ವಾಹಿನಿಗೆ ತರಬೇಕು ಎನ್ನುವ ಉದ್ದೇಶದಿಂದ ಅಭಿಯಾನ ಕಾರ್ಯಗಾರ ಮಾಡಲಾಗುತ್ತಿದೆ. ಇದು ಶೈಕ್ಷಣಿಕ ಸ್ಥಿತಿಗತಿ, ಆರೋಗ್ಯ ಮತ್ತು ವಿವಿಧ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆನ್ನುವ ವಿಶೇಷ ಕಾರ್ಯಕ್ರಮವಾಗಿದೆ ಎಂದರು.
ಮೂಲಸೌಕರ್ಯಗಳಿಂದ ವಂಚಿತರಾಗಿರುವ ಬುಡಕಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಈ ತರಬೇತಿ ಪೂರಕವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ತಿಳಿಸಿದರು.
ಹೊಸದುರ್ಗ ತಾಲ್ಲೂಕಿನಲ್ಲಿ 4 ಹಳ್ಳಿಗಳನ್ನ ಆಯ್ಕೆ ಮಾಡಲಾಗಿದೆ. ಒಂದು ಗ್ರಾಮದಲ್ಲಿ ಶೇ 50ರಷ್ಟು ಬುಡಕಟ್ಟು ಜನರು ವಾಸವಾಗಿರುವ ಹಳ್ಳಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪಟ್ಟಿಗೆ ಕಸಪ್ಪನಹಳ್ಳಿ, ಕಡವಿಗೆರೆ, ನಾಗತಿಹಳ್ಳಿ, ಕ್ಯಾದಿಗೆರೆ ಗ್ರಾಮಗಳು ಸೇರಿಕೊಂಡಿವೆ ಎಂದು ತಾಲ್ಲೂಕು ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್ ಮಾತನಾಡಿದರು.
ತಾ.ಪಂ ಇಒ ಸುನೀಲ್ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ. ನವೀನ್ ಕುಮಾರ್, ಮುಖಂಡ ಕರಿಯಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಬಿರಾರ್ಥಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.