
ಹೊಸದುರ್ಗ: ಹೊಸದುರ್ಗದ ಬಂಡೆ ಮಾರುಕಟ್ಟೆ ಸಮೀಪ ನೆಲೆಸಿರುವ ಈಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ಕಡೆ ಕಾರ್ತಿಕ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ತಿಕ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ 5.30ಕ್ಕೆ ನಂದಿಪುರ ಮಠದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಈಶ್ವರ ದೇವರಿಗೆ ಮಹಾರುದ್ರಾಭಿಷೇಕ ನಡೆಸಿದರು. 7.15ಕ್ಕೆ ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು. ಬೆಳಿಗ್ಗೆ 9ಕ್ಕೆ ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. 6.30 ರಿಂದ ಸಹಸ್ರ ದೀಪಾರ್ಚನೆ ಹಾಗೂ ವಿಶೇಷ ಆರತಿ ಪೂಜೆ ಧಾರ್ಮಿಕ ವಿಧಿಗಳನ್ವಯ ನಡೆದವು.
ವೀರಗಾಸೆ: ತುಮಕೂರಿನ ವೀರೇಶ್ ಅವರ ತಂಡದಿಂದ ಸಂಜೆ 6 ಗಂಟೆಯಿಂದ ಆರಂಭವಾದ ವೀರಗಾಸೆ ರಾತ್ರಿಯವರೆಗೂ ನಡೆಯಿತು. ಅಘೋರಿ ಶಿವತಾಂಡವ ನೃತ್ಯ, ಭದ್ರಕಾಳಿ ಅಮ್ಮನವರ ನೃತ್ಯ ನೋಡುಗರನ್ನು ಆಕರ್ಷಿಸಿತು. ವೀರಗಾಸೆಯ ತಂಡದವರೊಂದಿಗೆ ಮಕ್ಕಳು ಸಹ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಶಿವಲಿಂಗ ದರ್ಶನ: ಸೌರಾಷ್ಟ್ರದ ಸೋಮನಾಥೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ಉಜ್ಜಯಿನಿ ಮಹಾಕಾಳೇಶ್ವರ, ಶಿವಪುರಿ ಓಂಕಾರೇಶ್ವರ, ಪರ್ಲಿ ವೈದ್ಯನಾಥೇಶ್ವರ, ತಮಿಳುನಾಡಿನ ರಾಮೇಶ್ವರಸ್ವಾಮಿ, ಪೂನಾ ಭೀಮಾಶಂಕರಸ್ವಾಮಿ, ವಾರಣಾಸಿ ಕಾಶಿ ವಿಶ್ವನಾಥ, ದಾರಕುವನ ನಾಗೇಶ್ವರ, ನಾಸಿಕ್ ತ್ರಯಂಭಕೇಶ್ವರ, ಕೇದಾರನಾಥದ ಕೇದಾರನಾಥೇಶ್ವರ ಸ್ವಾಮಿ, ಔರಂಗಾಬಾದ್ ಘೃಘ್ನೇಶ್ವರ, ಧರ್ಮಸ್ಥಳ ಮಂಜುನಾಥೇಶ್ವರ ಶಿವಲಿಂಗ ಸೇರಿ 12 ದ್ವಾದಶ ಜ್ಯೋತಿರ್ಲಿಂಗಗಳಿಗೆ ಏಕಕಾಲದಲ್ಲಿ ಬಿಲ್ವಾರ್ಚನೆ ಮಾಡಲಾಯಿತು. ಬಹಳಷ್ಟು ಜನ ಸಂತಸ ಹಾಗೂ ಅಭಿಮಾನ ವ್ಯಕ್ತಪಡಿಸಿದರು ಎಂದು ಅರ್ಚಕ ಕರಿಸಿದ್ದಯ್ಯ ತಿಳಿಸಿದರು.
ಶಿವಪ್ರಿಯ ಸೇವಾ ಸಮಿತಿ ವತಿಯಿಂದ ಈ ಬಾರಿ ಪಟ್ಟಣದ ಈಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಪ್ರತಿ ವರ್ಷಕ್ಕಿಂತ ಈ ಬಾರಿ ಭಕ್ತರ ಸಂಕ್ಯೆ ಹೆಚ್ಚಾಗಿದ್ದು, ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.