ADVERTISEMENT

ಹೊಸದುರ್ಗ: ಸಮಗ್ರ ಕೃಷಿ ಮಾಡಿ ಹಿಗ್ಗಿದ ರೈತ

ಕೃಷಿ ಜತೆಗೆ ರೇಷ್ಮೆ, ಹಸು, ಕುರಿ ನಾಟಿಕೋಳಿ ಸಾಕಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 5:37 IST
Last Updated 29 ಜನವರಿ 2025, 5:37 IST
ಹೊಸದುರ್ಗದ ಮಲ್ಲಿಹಳ್ಳಿ ರೈತ ಮಹೇಶ್ ಅವರ ಜಮೀನಿನಲ್ಲಿ ಸಾವಯವ ಗೊಬ್ಬರದ ತೊಟ್ಟಿ ವೀಕ್ಷಿಸುತ್ತಿರುವ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ
ಹೊಸದುರ್ಗದ ಮಲ್ಲಿಹಳ್ಳಿ ರೈತ ಮಹೇಶ್ ಅವರ ಜಮೀನಿನಲ್ಲಿ ಸಾವಯವ ಗೊಬ್ಬರದ ತೊಟ್ಟಿ ವೀಕ್ಷಿಸುತ್ತಿರುವ ಸಚಿವ ಚಲುವರಾಯಸ್ವಾಮಿ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ   

ಹೊಸದುರ್ಗ: ನಗರ ಪ್ರದೇಶದ ಪರಿಸರಕ್ಕೆ ಹೊಂದಿಕೊಳ್ಳಲು ಆಗದ ಕಾರಣ ಬೆಂಗಳೂರು ತೊರೆದು ಹಳ್ಳಿಗೆ ಬಂದು ಕೃಷಿ ಅವಲಂಬಿಸಿದ ಯುವಕನೊಬ್ಬ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಸಚಿವರಿಂದಲೇ ಮೆಚ್ಚುಗೆ ಪಡೆದಿದ್ದಾರೆ.

ಕೇವಲ 4 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಮಾಡುತ್ತಿರುವ ತಾಲ್ಲೂಕಿನ ಮಲ್ಲಿಹಳ್ಳಿ ಗ್ರಾಮದ ಎಂ.ಮಹೇಶ್ ಅವರು ರಾಗಿ, ಸಾವೆ, ರೇಷ್ಮೆ ಜೊತೆಗೆ 9 ಹಸು, 5 ಕುರಿ ಹಾಗೂ 500 ನಾಟಿಕೋಳಿ ಸಾಕಾಣಿಕೆ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಸಂಪೂರ್ಣ ಸಾವಯವ ಕೃಷಿಯನ್ನೇ ಅವಲಂಬಿಸಿರುವ ಅವರು, ಕೃಷಿಗೆ ಸಂಬಂಧಿಸಿದ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಸಮಗ್ರ ಕೃಷಿ ಪದ್ದತಿ ಅನುಸರಿಸುತ್ತಿದ್ದಾರೆ.

ಮಹೇಶ್ ಹತ್ತನೇ ತರಗತಿವರೆಗೆ ಓದಿದ್ದು, ದುಡಿಮೆಗಾಗಿ ಬೆಂಗಳೂರಿಗೆ ಹೋಗಿದ್ದರು. ವಾಪಸ್‌ ಗ್ರಾಮಕ್ಕೆ ಬಂದು ತರಕಾರಿ, ಹಣ್ಣು ಬೆಳೆಯುವುದು ಹಾಗೂ ಕುರಿ ಕಾಯುವುದರ ಜೊತೆಗೆ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದರು.

‘2015ರಲ್ಲಿ ಅಂದಿನ ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಾಸಕ ಬಿ.ಜಿ. ಗೋವಿಂದಪ್ಪ ಅಚಾನಕ್ ಆಗಿ ಮಹೇಶ್‌ ಮಲ್ಲಿಹಳ್ಳಿಗೆ ಭೇಟಿ ನೀಡಿ ಸಾವೆ ಬೆಳೆಯನ್ನು ವೀಕ್ಷಿಸಿದರು. ನಂತರ ಮಲ್ಲಿಹಳ್ಳಿಯನ್ನು ಸಾವಯವ ಗ್ರಾಮವನ್ನಾಗಿ 3 ವರ್ಷ ದತ್ತು ಪಡೆದರು. ಆಗ ಗ್ರಾಮದಲ್ಲಿ ಎರೆಹುಳು ಘಟಕ, ಸಾವಯವ ಗೊಬ್ಬರದ ಘಟಕ, ಜೀವಾಮೃತ ಘಟಕ ಸೇರಿ 70ಕ್ಕೂ ಅಧಿಕ ಘಟಕಗಳನ್ನು ಗ್ರಾಮದಲ್ಲಿ ಕೃಷಿ ಇಲಾಖೆ ನಿರ್ಮಿಸಿತು. ಅಂದಿನಿಂದ ಇಂದಿನವರೆಗೂ ಆ ಘಟಕಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲರ ಸಹಕಾರದಿಂದ ಕೃಷಿ ಬಗ್ಗೆ ಒಲವು ಮಾಡಿತು’ ಎಂದು ಮಹೇಶ್ ಮಾಹಿತಿ ಹಂಚಿಕೊಂಡರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ, ಎಫ್.ಪಿ.ಓ ಅಧಿಕಾರಿ ಗಿರೀಶ್ ಹಾಗೂ ರೈತ ಮಹೇಶ್ವರಪ್ಪ ಅವರ ಮಾರ್ಗದರ್ಶನದಿಂದ ಬೆಂಗಳೂರು, ಧಾರವಾಡ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಕೃಷಿ ಮೇಳಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಇತರ ರೈತರ ಕೃಷಿ ಸಾಧನೆ ಬಗ್ಗೆ ಸ್ಫೂರ್ತಿ ಹೊಂದಿ, ಛಲಬಿಡದೆ ಶ್ರಮಪಟ್ಟು ಕೃಷಿಯಲ್ಲಿ ಸಾಧಿಸಿದ್ದಾರೆ. ಇಲಾಖೆ ಅಧಿಕಾರಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ.

ರೇಷ್ಮೆ, ಸಾವೆ, ರಾಗಿ, ಬಾಳೆ, ನಿಂಬೆ, ಸೀಬೆ, ಸಪೋಟ, ಮಾವು, ತೆಂಗು, ಅಡಿಕೆ, ಪಪ್ಪಾಯದಂತಹ ಮಿಶ್ರ ಬೆಳೆ ಅವಲಂಬಿಸಿದ್ದಾರೆ. ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳದೆ ಕುಟುಂಬಸ್ಥರ ಸಹಕಾರದಿಂದ ಕೃಷಿಯಲ್ಲಿ ತೊಡಗಿದ್ದಾರೆ. ಈಚೆಗೆ ತಾಲ್ಲೂಕಿಗೆ ಬಂದಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಬಿ.ಜಿ. ಗೋವಿಂದಪ್ಪ ಅವರು ಮಹೇಶ್‌ ಅವರ ಜಮೀನಿಗೆ ಭೇಟಿ ನೀಡಿದ್ದರು.

ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿ ಹಲವು ಭಾಗಗಳಿಂದ ರೈತರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ತಾಲ್ಲೂಕಿನ ಉತ್ತಮ ಕೃಷಿಕ ಪ್ರಶಸ್ತಿಯನ್ನೂ ಸಹ ಮಹೇಶ್‌ ಪಡೆದಿದ್ದಾರೆ.

ಎಂ. ಮಹೇಶ್ ಅವರ ರೇಷ್ಮೆ ಕೃಷಿ
ಮಲ್ಲಿಹಳ್ಳಿ ರೈತ ಎಂ. ಮಹೇಶ್
ಒಂದೇ ಬೆಳೆ ಬೆಳೆಯುವ ಬದಲು ಸಮಗ್ರ ಕೃಷಿ ಅವಲಂಬಿಸಿ ಆದಷ್ಟು ಸಾವಯವ ಗೊಬ್ಬರ ಉಪಯೋಗಿಸಬೇಕು. ಖುಷಿಯಿಂದ ಕೃಷಿ ಮಾಡಿ. ಬೇಗ ಯಶಸ್ಸು ಪಡೆಯಬಹುದು.
ಮಹೇಶ್ ಎಂ ಮಲ್ಲಿಹಳ್ಳಿ ರೈತ
ರೈತರು ಆಸಕ್ತಿಯಿಂದ ಕೃಷಿ ಮಾಡಬೇಕು. ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ ತೋಟಗಾರಿಕೆ ಬೆಳೆಗಳು ಸೇರಿ ಹಲವು ಪದ್ದತಿಗಳನ್ನು ಅಳವಡಿಸಿಕೊಂಡರೆ ನೆಮ್ಮದಿಯಿಂದ ಕೃಷಿ ಮಾಡಬಹುದು.
ಸಿ.ಎಸ್. ಈಶ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.