ADVERTISEMENT

ಶಿವಮೂರ್ತಿ ಕೈಹಿಡಿದ ಎಲೆಕೋಸು ಕೃಷಿ

ಸಮಗ್ರ ಕೃಷಿ ಪದ್ಧತಿ ಅಳವಡಿಕೆ; ವರ್ಷಕ್ಕೆ ₹20 ಲಕ್ಷದಿಂದ ₹25 ಲಕ್ಷ ಆದಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:39 IST
Last Updated 24 ಡಿಸೆಂಬರ್ 2025, 7:39 IST
ಉತ್ಕೃಷ್ಟವಾಗಿ ಬೆಳೆದಿರುವ ಎಲೆಕೋಸು ತೋರಿಸುತ್ತಿರುವ ಶಿವಮೂರ್ತಿ 
ಉತ್ಕೃಷ್ಟವಾಗಿ ಬೆಳೆದಿರುವ ಎಲೆಕೋಸು ತೋರಿಸುತ್ತಿರುವ ಶಿವಮೂರ್ತಿ    

ಹೊಸದುರ್ಗ: ತಾಲ್ಲೂಕಿನ ಮಾಡಿದಕೆರೆ ಹೋಬಳಿ ರಂಗವ್ವನಹಳ್ಳಿಯ ರೈತ ಶಿವಮೂರ್ತಿ ಅವರು ಎಲೆಕೋಸು ಬೆಳೆದು ಅಪಾರ ಲಾಭ ಗಳಿಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

1 ಎಕರೆ ಭೂಮಿಯಲ್ಲಿ ಸಸಿಗಳನ್ನು ನಾಟಿ ಮಾಡಲಾಗಿದೆ. ಸದ್ಯ ಒಂದು ಕೋಸು 1.5 ರಿಂದ 2 ಕೆ.ಜಿ ವರೆಗೂ ತೂಕ ಬರುತ್ತಿದೆ. 60 ರಿಂದ 70 ದಿನಗಳಲ್ಲಿ ಸಮೃದ್ಧ ಬೆಳೆ ಕೈಸೇರಿದೆ. ಶಿವಮೂರ್ತಿ ಅವರು 20 ಟನ್ ಎಲೆಕೋಸು ಬೆಳೆದಿದ್ದು, ಹಾಸನದಿಂದ ಬಂದು ವ್ಯಾಪಾರಸ್ಥರೇ ಖರೀದಿಸಿದ್ದಾರೆ. ₹50 ಸಾವಿರ ವ್ಯಯಿಸಿ ₹2 ಲಕ್ಷ ಆದಾಯ ಗಳಿಸಿದ್ದಾರೆ. ಇನ್ನೂ 1 ಎಕರೆ ಜಮೀನಿನಲ್ಲಿ  ಬೆಳೆಯಿದೆ.  

2019ರಿಂದಲೂ ಎಲೆಕೋಸು ಇವರ ಕೈ ಹಿಡಿದಿದೆ. ಅಂದು 5 ಸಾವಿರ ಸಸಿ ನಾಟಿ ಮಾಡಿದ್ದು ₹1 ಲಕ್ಷ ಆದಾಯ ಗಳಿಸಲಾಗಿತ್ತು. 2023 ರಲ್ಲಿ ₹2 ಲಕ್ಷ ಆದಾಯ ಲಭಿಸಿತ್ತು. ಈ ಬಾರಿ 20 ಟನ್‌ ಇಳುವರಿ ಲಭಿಸಿದ್ದು, ಎಕರೆಗೆ ₹2 ಲಕ್ಷ ಆದಾಯ ಗಳಿಸಲಾಗಿದೆ. 

‘ಎಲೆಕೋಸು ಬೆಳೆಯಲು ಉತ್ತಮ ಗುಣಮಟ್ಟದ ಬೀಜಗಳನ್ನು ಆರಿಸಬೇಕು. 25 ರಿಂದ 30 ದಿನಗಳವರೆಗೆ ಮೊಳಕೆ ಬರಿಸಿ, ನಂತರ ಅವುಗಳನ್ನು ನಾಟಿ ಮಾಡಬೇಕು. ಸಸಿ ನಾಟಿ ಮಾಡುವ ಮುನ್ನ ಕೊಟ್ಟಿಗೆ ಗೊಬ್ಬರ ಅಥವಾ ಇತರೆ ಗೊಬ್ಬರವನ್ನು ಹಾಕಿ, ಭೂಮಿ ಹದ ಮಾಡಿಕೊಳ್ಳಬೇಕು. ಗಿಡಗಳ ನಡುವೆ 35 ರಿಂದ 40 ಸೆಂ.ಮೀ., ಸಾಲುಗಳ ನಡುವೆ 45 ರಿಂದ 60 ಸೆಂ.ಮೀ. ಅಂತರವಿರುವಂತೆ ನೋಡಿಕೊಳ್ಳಬೇಕು’ ಎಂದು ಹೇಳುತ್ತಾರೆ ಶಿವಮೂರ್ತಿ.

ADVERTISEMENT

‘ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಾಟಿ ಮಾಡಲಾಗಿತ್ತು. ನೀರು, ಗೊಬ್ಬರ ಹಾಗೂ ಕೀಟ ನಿಯಂತ್ರಣದ ವಿಧಾನಗಳನ್ನು ಸಮತೋಲಿತವಾಗಿ ಅನುಸರಿಸುತ್ತಿರಬೇಕು. ಕಾರ್ಮಿಕರ ಅಭಾವದಿಂದಾಗಿ ಮನೆಯವರೆಲ್ಲರೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ. ವಾರಕ್ಕೊಮ್ಮೆ ಔಷಧ ಸಿಂಪಡಣೆ ಆಗಬೇಕು. ವಿವಿಧೆಡೆಯಿಂದ ಹತ್ತಾರು ಜನರು ಜಮೀನು ನೋಡಲು ಬರುತ್ತಾರೆ’ ಎಂದು ಅವರು ತಿಳಿಸಿದರು. 

ಒಂದು ಬೆಳೆಗೆ ಸೀಮಿತರಾಗದೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು, ಒಂದಿಲ್ಲೊಂದು ಬೆಳೆಯ ಲಾಭ ಗಳಿಸುತ್ತಾ, ನಿತ್ಯ ಉತ್ತಮ ಆದಾಯ ಪಡೆಯುತ್ತಿದ್ದಾರೆ. ತೆಂಗು, ಅಡಿಕೆ, ಬದನೆ, ಟೊಮೆಟೊ, ಸಾಂಬಾರ್ ಸೌತೆ, ಎಲೆಕೋಸು, ಬೀನ್ಸ್ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದು ವರ್ಷಕ್ಕೆ ₹20 ಲಕ್ಷದಿಂದ ₹25 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಬದನೆಕಾಯಿ 5 ಸಾವಿರ ಸಸಿ, ಟೊಮೆಟೊ 3 ಸಾವಿರ ಸಸಿ ನಾಟಿ ಮಾಡಲಾಗಿದೆ. ಮುಂದಿನ 15 ದಿನಗಳೊಳಗೆ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ.

‘ಲಾಭ, ನಷ್ಟ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಷ್ಟವಾದರೂ ಛಲಬಿಡದೆ ಮುನ್ನುಗ್ಗಿದರೆ, ಬೇರೆ ಬೆಳೆಯಲ್ಲಿ ಖಂಡಿತಾ ಲಾಭ ಸಿಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೆಲ ತರಕಾರಿಗಳಿಗೆ ಮೌಲ್ಯ ಕಡಿಮೆಯಿರುತ್ತದೆ. ದೊಡ್ಡ ಪ್ರಮಾಣದ ತರಕಾರಿ ಬೆಳೆದಾಗ ರೈತರು ದೊಡ್ಡ ಪಟ್ಟಣಗಳ ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಿ, ಉತ್ತಮ ಆದಾಯ ಗಳಿಸಬಹುದು’ ಎಂಬುದು ಶಿವಮೂರ್ತಿ ಅವರ ಪತ್ನಿ ವೀಣಾ ತಿಳಿಸುತ್ತಾರೆ. 

ಶಿವಮೂರ್ತಿ ಅವರ ಜಮೀನಿನ ಎಲೆಕೋಸನ್ನು ವ್ಯಾಪಾರಿಗಳು ಖರೀದಿಸಿ ಲಾರಿಯಲ್ಲಿ ತುಂಬಿರುವುದು
ಶಿವಮೂರ್ತಿ ಅವರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಎಲೆಕೋಸು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.