ADVERTISEMENT

ಹಿನ್ನೀರು; ಮೀನು ಬೇಟಿ ಬಲು ಜೋರು

ಕೋಡಿ ಬಿದ್ದ ವಿವಿ ಜಲಾಶಯ; ರೈತರಿಗೆ ನೋವು, ಮೀನುಗಾರರಿಗೆ ಖುಷಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:49 IST
Last Updated 31 ಅಕ್ಟೋಬರ್ 2025, 5:49 IST
ಹೊಸದುರ್ಗದ ಬಲ್ಲಾಳಸಮುದ್ರದ ಕೆರೆ ಕೋಡಿಯಲ್ಲಿ ಮೀನುಗಾರರು ಹಿಡಿದಿಟ್ಟಿರುವ ಮೀನುಗಳು
ಹೊಸದುರ್ಗದ ಬಲ್ಲಾಳಸಮುದ್ರದ ಕೆರೆ ಕೋಡಿಯಲ್ಲಿ ಮೀನುಗಾರರು ಹಿಡಿದಿಟ್ಟಿರುವ ಮೀನುಗಳು   

ಹೊಸದುರ್ಗ: ವಿವಿ ಸಾಗರ ಜಲಾಶಯ ಕೋಡಿ ಬಿದ್ದು ಕೃಷಿ ಭೂಮಿ, ಮನೆಗಳು ಜಲಾವೃತವಾಗಿರುವುದು ರೈತರಿಗೆ ನೋವು ತರಿಸಿದೆ. ಆದರೆ, ಹಿನ್ನೀರು ಪ್ರದೇಶದಲ್ಲಿ ನೀರಿನ ಜೊತೆ ಮೀನುಗಳೂ ಬಂದಿದ್ದು ಮೀನು ಹಿಡಿಯುವವರಿಗೆ ಭರ್ಜರಿ ಖುಷಿ ತಂದಿದೆ.

ಹಿನ್ನೀರು ಪ್ರದೇಶಗಳಲ್ಲಿ ಜಮೀನು, ರಸ್ತೆ, ಸಂಪರ್ಕ ಸೇತುವೆ, ಗ್ರಾಮಗಳಲ್ಲಿ ನೀರು ನಿಂತಿದೆ. ತಾಲ್ಲೂಕಿನ ಬಲ್ಲಾಳ ಸಮುದ್ರ ಕೆರೆ ಕೋಡಿ ಬಿದ್ದಿದೆ. ತಾಲ್ಲೂಕಿನ ವಿವಿಧೆಡೆ ಹಲವು ಕೆರೆ ಕೋಡಿ ಬಿದ್ದಿವೆ. ಅಜ್ಜಂಪುರ, ಕಡೂರು, ಹೊಳಲ್ಕೆರೆ ಹಾಗೂ ಇತರೆ ಕೆರೆಗಳು ಭರ್ತಿಯಾಗಿವೆ. ಪರಿಣಾಮ ಹಿನ್ನೀರು ಹಾಗೂ ಮೀನಿನ ಸಂಖ್ಯೆಯೂ ಅಧಿಕವಾಗಿದೆ.

ಕಾಟ್ಲಾ, ಗೌರಿ, ರಘು, ಜಿಲಾಬಿ, ಬಾಳೆ ಮೀನು ಸೇರಿದಂತೆ ಮತ್ತಿತರ ಜಾತಿಯ ಮೀನುಗಳು ಮಳೆ ನೀರಿನ ಜೊತೆಗೆ ಕೊಚ್ಚಿ ಹೋಗುತ್ತಿವೆ. ಮೀನು ಬೇಟೆಗಾರರು ಮೀನು ಹಿಡಿಯುತ್ತಿದ್ದಾರೆ. ಕೆಲವರು ಬಲೆ, ಗಾಳ, ಬಟ್ಟೆ, ಕೂಳೆ ಸೇರಿದಂತೆ ಮತ್ತಿತರ ಸಾಧನಗಳಿಂದ ಮೀನು ಹಿಡಿಯುತ್ತಿದ್ದರೆ ಮತ್ತೆ ಕೆಲವೆಡೆ ನೀರಿನ ಮೇಲೆ ತೇಲಿ ಹೋಗುವ ಮೀನುಗಳನ್ನು ದೊಣ್ಣೆಯಿಂದ ಹೊಡೆದು, ಟೊಮೊಟೊ ಬಾಕ್ಸ್‌ಗಳನ್ನು ಮುಚ್ಚಿ ಹಿಡಿಯುತ್ತಿದ್ದಾರೆ. ವಿವಿ ಸಾಗರದ ಹಿನ್ನೀರಿನ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಮೀನು ಬೇಟೆಗಾರರ ಗುಂಪುಗಳು ಸಾಮಾನ್ಯವಾಗಿಬಿಟ್ಟಿದೆ.

ADVERTISEMENT

ಮಹಿಳೆಯರು, ಮಕ್ಕಳು ಕೂಡ ಬಲೆ ತಂದು ಮೀನು ಹಿಡಿಯುತ್ತಿದ್ದಾರೆ. 2–3 ಕೆ.ಜಿಯಿಂದ ಸುಮಾರು 10 ಕೆ.ಜಿ.ವರೆಗೂ ದಪ್ಪ ಮೀನುಗಳಿವೆ. ಚಿತ್ರದುರ್ಗ, ತುಮಕೂರು, ಚನ್ನಗಿರಿ, ನಲ್ಲೂರು, ಗುಬ್ಬಿ, ಹಿರಿಯೂರು, ಹೊಸದುರ್ಗ ತಾಲ್ಲೂಕು ಸೇರಿದಂತೆ ವಿವಿಧೆಡೆಯಿಂದ ಹತ್ತಾರು ಜನರು ಬಲೆ ಮತ್ತು ಗಾಳ ಬಳಸಿ ಮೀನು ಹಿಡಿಯುತ್ತಿದ್ದಾರೆ.

ತಾಲ್ಲೂಕಿನ ಕೆಲ್ಲೋಡು, ಕಾರೇಹಳ್ಳಿ, ಲಿಂಗದಹಳ್ಳಿ, ಅತ್ತಿಮಗ್ಗೆ, ಅರೇಹಳ್ಳಿ, ಮತ್ತೋಡು ಮತ್ತು ಮಲದೊರೆ ಬಳಿಯಲ್ಲಿನ ಹಿನ್ನೀರಿನಲ್ಲಿ ಮೀನುಗಾರರ ದಂಡೇ ಇದೆ. ದಿನಕ್ಕೆ ಕ್ವಿಂಟಲ್‌ಗಟ್ಟಲೆ ಮೀನು ಹಿಡಿದು ಮಾರಾಟ ಮಾಡುತ್ತಿದ್ದಾರೆ.

‘ಭಾರಿ ಪ್ರಮಾಣದ ನೀರಿನಿಂದಾಗಿ ಮೀನುಗಳು ಹರಿದು ಬರುತ್ತಿದ್ದು ದಿನಕ್ಕೆ 20-40 ಕೆ.ಜಿ. ಮೀನು ಹಿಡಲಾಗುತ್ತಿದೆ. ಸ್ವಲ್ಪ ಮೀನನ್ನು ಆಹಾರಕ್ಕಾಗಿ ಬಳಸಿದರೆ, ಮತ್ತೆ ಕೆಲವು ಮೀನುಗಳ ಮಾರಾಟ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮಾರೇನಹಳ್ಳಿ ತಿಪ್ಪಣ್ಣ ಹೇಳಿದರು.

ಹೊಸದುರ್ಗದ ಕೆಲ್ಲೋಡು ಸಮೀಪ ಯುವಕರೊಬ್ಬರು ಮೀನಿನ ಸೆರೆಗಾಗಿ ಬಲೆ ಹಾಕುತ್ತಿರುವುದು
ಹೊಸದುರ್ಗದ ಮೀನುಗಾರರೊಬ್ಬರ ಕೈ ಸೇರಿದ 5 ಕೆ.ಜಿ‌ಯ ದೊಡ್ಡ ಮೀನು
ಹೊಸದುರ್ಗದ ಮಲದೊರೆ ಬಳಿ ಮಹಿಳೆಯರು ದೋಣಿಯಲ್ಲಿ ಸಾಗಿ ಮೀನು ಹಿಡಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.