ಹೊಸದುರ್ಗ: ‘ನರೇಗಾ ಯೋಜನೆಯ ಮಾರ್ಗಸೂಚಿ ಅನ್ವಯವೇ ಕೆಲಸ ನಿರ್ವಹಿಸಿ, ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಹೆಬ್ಬಳ್ಳಿ ಸೇರಿ ವಿವಿಧ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿ, ನರೇಗಾ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೆಬ್ಬಳ್ಳಿಯಲ್ಲಿರುವ ಗೋದಾಮು ಕಟ್ಟಡವು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಬೇಕು ಎಂದು ನರೇಗಾ ಎಂಜಿನಿಯರ್‌ಗೆ ಸೂಚಿಸಿದರು. ನಂತರ ಅದೇ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದು, ಔಷಧ ಕೊಠಡಿಗೆ ತೆರಳಿ ಪರಿಶೀಲಿಸಿದರು. ‘ಈ ಕೇಂದ್ರಕ್ಕೆ ಬರುವ ರೋಗಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಸಲಹೆ ಮತ್ತು ಔಷಧೋಪಚಾರಗಳನ್ನು ನೀಡಿ ಆರೋಗ್ಯವಂತರನ್ನಾಗಿ ಮಾಡುವುದು ನಿಮ್ಮ ಜವಾಬ್ದಾರಿ’ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.
ಸಾಮಾಜಿಕ ಅರಣ್ಯ ವಲಯ ವತಿಯಿಂದ ಕುಂಬಾರಗಟ್ಟೆ ನರ್ಸರಿಯಲ್ಲಿ ನರೇಗಾ ಯೋಜನೆಯಡಿ ಸಸಿಗಳನ್ನು ಬೆಳೆಸಿದ್ದು, ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ‘ಮಳೆಗಾಲದ ಆರಂಭದಲ್ಲಿ ಸಸಿಗಳನ್ನು ನೆಡಬೇಕು. ಇದಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು, ಸಕಾಲದಲ್ಲಿ ಸಸಿಗಳನ್ನು ವಿತರಿಸಿ. ಮಳೆಗಾಲ ಆರಂಭದ ಹಂತದಲ್ಲೇ ಸಸಿಗಳನ್ನು ನೆಡಿ ಎಂದು ತಾಕೀತು ಮಾಡಿದರು.
ಕೊಂಡಾಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾದ ಹೈಟೆಕ್ ಶೌಚಾಲಯ ಮತ್ತು ಅಡುಗೆ ಕೋಣೆ ವೀಕ್ಷಿಸಿದರು.
ಅಹಮ್ಮದ್ ನಗರ ಗಡಿಯಲ್ಲಿ ಹೊಸದುರ್ಗ ಪಟ್ಟಣ ಮತ್ತು 346 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮೊದಲನೇ ಹಂತದ 3 ಲಕ್ಷ ಲೀಟರ್ ಮತ್ತು 4.5 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್‌ಹೌಸ್‍ಗೆ ಭೇಟಿ ನೀಡಿ ವೀಕ್ಷಿಸಿದರು. ಈ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಮುಖ್ಯ ಎಂಜಿನಿಯರ್ ಅವರಿಂದ ಮಾಹಿತಿ ಪಡೆದರು.
ಅರಣ್ಯ ಇಲಾಖೆಯಿಂದ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಬಸನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್, ತಾಲ್ಲೂಕು ಪಂಚಾಯಿತಿ ಇಒ ಸುನೀಲ್, ಸಹಾಯಕ ನಿರ್ದೇಶಕ (ನರೇಗಾ) ನಯಾಜ್, ನರೇಗಾ ಯೋಜನೆಯ ಸಂಯೋಜಕ ಸಂತೋಷ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.