ADVERTISEMENT

ಹೊಸದುರ್ಗ |' ಗುಡಿಯ ಹಂಗಿಂದ ಹೊರಬರದ ಭಕ್ತರು'

ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 8:30 IST
Last Updated 3 ನವೆಂಬರ್ 2025, 8:30 IST
ಹೊಸದುರ್ಗದ ಸಾಣೇಹಳ್ಳಿ ಭಾನುವಾರ ಆಯೋಜಿಸಿದ್ದ ಚಿಂತನಾ ಕಾರ್ಯಕ್ರಮದಲ್ಲಿ ‘ಅಂತರಂಗದ ಬೆಳಕು ಕೃತಿ’ ಬಿಡುಗಡೆ ಮಾಡಲಾಯಿತು
ಹೊಸದುರ್ಗದ ಸಾಣೇಹಳ್ಳಿ ಭಾನುವಾರ ಆಯೋಜಿಸಿದ್ದ ಚಿಂತನಾ ಕಾರ್ಯಕ್ರಮದಲ್ಲಿ ‘ಅಂತರಂಗದ ಬೆಳಕು ಕೃತಿ’ ಬಿಡುಗಡೆ ಮಾಡಲಾಯಿತು   

ಹೊಸದುರ್ಗ: ಅಂಗೈಯಲ್ಲಿ ಲಿಂಗ ಹಿಡಿದುಕೊಂಡು ಸಲ್ಲಿಸುವ ವಿಶೇಷ ಪೂಜೆ ಲಿಂಗಾಯತ ಧರ್ಮದಲ್ಲಿ ಮಾತ್ರ ಸಾಧ್ಯ. ಆದರೆ, ಲಿಂಗಾಯತರು ಸಂಪ್ರದಾಯಗಳಿಂದ ಹಾಗೂ ಗುಡಿಯ ಹಂಗಿನಿಂದ ಹೊರಬರುತ್ತಿಲ್ಲ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಶ್ರೀಮಠದ ಬಸವ ಮಹಾಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೀಕ್ಷೆ ಎಂದರೆ ತಿಳಿವಳಿಕೆ ನೀಡುವುದು. ಅರಿವನ್ನು ಮೂಡಿಸುವುದು. ಕಂಡ ಕಂಡ ದೇವಸ್ಥಾನಗಳಿಗೆ ಹೋಗುವುದಲ್ಲ. ದೇವಸ್ಥಾನಗಳಿಗೆ ಹೋದರೂ ದೇವರನ್ನು ಮುಟ್ಟಿ ಪೂಜಿಸುವುದು ಕಷ್ಟ. ಇದಕ್ಕಾಗಿ ಬಸವಣ್ಣನವರು ದೇಹವೇ ದೇಗುಲ ಎಂದರು. ಆದರೆ ಅವರು ಗುಡಿಯನ್ನು ತಿರಸ್ಕರಿಸಲಿಲ್ಲ. ಶಿರವೇ ಬಂಗಾರದ ಕಳಸವೆಂದರು. ಹೀಗಿರುವಾಗ ಗುಡಿಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಇದಕ್ಕಾಗಿ ಲಿಂಗಾಯತ ಧರ್ಮವನ್ನು ಬಸವಣ್ಣನವರು ಆರಂಭಿಸಿದರು. ಬದುಕಿನ ಸೌಭಾಗ್ಯಕ್ಕಾಗಿ, ನಿಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಲಿಂಗದೀಕ್ಷೆ ಪಡೆಯಿರಿ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ಶಿವ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಅವರು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯ ಗುಣಮಟ್ಟ ಹಾಗೂ ಸಂಸ್ಕಾರ ಮರೀಚಿಕೆಯಾಗಿದೆ. ಅಂಕಗಳೇ ಆಧಾರವಾಗಬಾರದು. ದುರಂತವೆಂದರೆ ಅಪರಾಧ ಚಟುವಟಿಕೆಗಳು ವಿದ್ಯಾವಂತರಿಂದಲೇ ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಹೆಚ್ಚು ತೊಡಗಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಧ್ವಜಾರೋಹಣ ನೆರವೇರಿಸಿದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಎಚ್. ಬಿಲ್ಲಪ್ಪ ಮಾತನಾಡಿ, ನಮ್ಮ ನಾಡು–ನುಡಿ ನಮ್ಮ ಬದುಕನ್ನು ರೂಪಿಸುತ್ತಿವೆ. ಹಾಗೆಯೇ ಸಂಸ್ಕಾರ– ಸಂಸ್ಕೃತಿಗಳನ್ನು ನೀಡುತ್ತವೆ. ಇದಕ್ಕಾಗಿ ನಮ್ಮ ನಾಡನ್ನು ಗೌರವಿಸಬೇಕು.

ಚಿಂತನಾ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಕುರಿತು ತರಳಬಾಳು ವಿದ್ಯಾಸಂಸ್ಥೆಯ ಅಧ್ಯಾಪಕರಾದ ಎಚ್.ಎಸ್.ದ್ಯಾಮೇಶ್ ಮಾತನಾಡಿ, ಪ್ರಾರ್ಥನೆ ಎಂದರೆ ಕೈಮುಗಿದು ಜಪಿಸುವುದಲ್ಲ. ಹಾಗೆಯೇ ವ್ಯಕ್ತಿಗತವಾಗಿ ಆರಂಭವಾಗುವ ಪ್ರಾರ್ಥನೆಯು ಸಮಷ್ಟಿಯೆಡೆಗೆ ಸಾಗಬೇಕು. ಅಂದರೆ ಸಕಲ ಜೀವಾತ್ಮರಿಗೆ ಲೇಸು ಬಯಸುವಂತಾಗಬೇಕು ಎಂದು ಹೇಳಿದರು.

ADVERTISEMENT

ಸಿರಿಮಠ ಹಾಗೂ ವಿನಯ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಸಹಶಿಕ್ಷಕ ಎ.ಬಿ. ಮಲ್ಲಿಕಾರ್ಜುನ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಭಕ್ತರಿದ್ದರು.

ರಘು 

ನಾಟಕೋತ್ಸವದಲ್ಲಿ ಇಂದು

ಚಿಂತನಾ ಕಾರ್ಯಕ್ರಮ: ಶಿಕ್ಷಕಿ ವಿ. ಗೀತಾ ಜ್ಞಾನಮೂರ್ತಿ ವಿಷಯ - ಗುರುಶಿಷ್ಯರು ಸ್ಥಳ : ಸಾಣೇಹಳ್ಳಿಯ ಶಿವಕುಮಾರ ರಂಗಮಂದಿರ ಸಮಯ: ಬೆಳಿಗ್ಗೆ 8 ಕ್ಕೆ ವೇದಿಕೆ ಕಾರ್ಯಕ್ರಮ ಸಾನ್ನಿಧ್ಯ: ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಉಪನ್ಯಾಸ : ವಿಷಯ : ಆರೋಗ್ಯವೇ ಭಾಗ್ಯ ಹೊನ್ನಾವರದ ಎಚ್.ಎಸ್. ಅನುಪಮಾ ಅವರಿಂದ ಅತಿಥಿಗಳು: ಅರಣ್ಯ ಮತ್ತು ಜೈವಿಕ ಪರಿಸರ ಸಚಿವ ಈಶ್ವರ ಖಂಡ್ರೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥ ಪಿ.ಜಿ.ಆರ್. ಸಿಂಧ್ಯಾ ನಟಿ ಪೂಜಾಗಾಂಧಿ ನಟ ನೀನಾಸಂ ಸತೀಶ್ ಚಿಂತಕ ಎಸ್.ಜಿ. ಸಿದ್ಧರಾಮಯ್ಯ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಸಫಾಯಿ ಕರ್ಮಚಾರಿ ಆಯೋಗದ ರಾಜ್ಯಾಧ್ಯಕ್ಷ ಪಿ. ರಘು ಭಾಗವಹಿಸುವರು. ನಾಟಕ : ರವಿಕಿರಣ್ ಆರ್ ಬಳ್ಳಗೆರೆ ರಚನೆಯ ಆಳಿದ ಮಾಸ್ವಾಮಿಗಳು ನಾಟಕವನ್ನು ಮೈಸೂರಿನ ನಾಲ್ವಡಿ ಸೋಶಿಯಲ್ ಕಲ್ಚರಲ್ ಅಂಡ್ ಎಜ್ಯುಕೇಶನಲ್ ಟ್ರಸ್ಟ್ ತಂಡದವರು ಅಭಿನಯಿಸುವರು. ಸ್ಥಳ : ಸಾಣೇಹಳ್ಳಿ ಬಯಲು ರಂಗಮಂದಿರ ಸಮಯ: ಸಂಜೆ 6ಕ್ಕೆ

‘ಮಠಗಳ ಬಗ್ಗೆ ಅಪಾರ ಗೌರವವಿದೆ’

ರಘು ಅಧ್ಯಕ್ಷರು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಬೆಂಗಳೂರು ಸಿರಿಗೆರೆ ಹಾಗೂ ಸಾಣೇಹಳ್ಳಿ ಮಠಗಳು ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಬದುಕು ಕಲ್ಪಿಸಿಕೊಟ್ಟಿದೆ. ಈ ಮಠಗಳ ಬಗ್ಗೆ ಅಪಾರ ಗೌರವವಿದೆ. ಮಠದ ಶಿಸ್ತು ಭಕ್ತರ ಭಕ್ತಿ ಮಾಡಿ ಹಾಗೂ ಭಕ್ತರ ಒಡನಾಟ ಇತರರಿಗೆ ಮಾದರಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಾಟಕಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿತ್ತು. ಅದೇ ರೀತಿ ಸಾಣೇಹಳ್ಳಿಯಲ್ಲಿ ನಾಟಕಗಳು ವಚನ ನೃತ್ಯಗಳ ಮೂಲಕ ಬಸವ ತತ್ವ ಪ್ರಚಾರ ಕಾರ್ಯ ನಡೆಯುತ್ತಿದೆ. ನಾಟಕಗಳ ಪರಂಪರೆಯನ್ನು ಪಂಡಿತಾರಾಧ್ಯ ಶ್ರೀಗಳು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ. ಆಧುನಿಕ ಮಾಧ್ಯಮಗಳ ಹಾವಳಿಯಿಂದ ನಾಟಕಗಳ ಪ್ರದರ್ಶನ ಹಿಂದೆ ಸರಿದಿತ್ತು. ಆದರೀಗ ಪುನಃ ನಾಟಕಗಳ ಬಗ್ಗೆ ಜನರಿಗೆ ಒಲವು ಹೆಚ್ಚುತ್ತಿದೆ. ಅದಕ್ಕೆ ಸಾಕ್ಷಿಯಾಗಿದೆ ಸಾಣೇಹಳ್ಳಿ ನಾಟಕೋತ್ಸವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.