ADVERTISEMENT

ಹೊಸದುರ್ಗ: ರಾತ್ರಿ ವೇಳೆ ಮುಖ್ಯ ರಸ್ತೆಗಳಲ್ಲಿಲ್ಲ ಬೆಳಕಿನ ಖಾತ್ರಿ..!

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:12 IST
Last Updated 15 ಅಕ್ಟೋಬರ್ 2025, 6:12 IST
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲೆ ಆವರಿಸಿರುವುದು
ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲೆ ಆವರಿಸಿರುವುದು   

ಹೊಸದುರ್ಗ: ಪಟ್ಟಣದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದಲೂ ಬೀದಿ ದೀಪದ ಬೆಳಕಿಲ್ಲ. ಈಚೆಗೆ ರಸ್ತೆ ವಿಸ್ತರಣೆ ಮಾಡಿ, ಕಂಬಗಳನ್ನು ನೆಟ್ಟು, ವಿಶೇಷವಾಗಿ ಅಲಂಕರಿಸಲಾಗಿದೆ. ಆಕರ್ಷಕ ವಿದ್ಯುತ್ ದೀಪಗಳಿವೆ. ಆದರೆ ಬೆಳಕು ಮಾತ್ರ ಇಲ್ಲ. ಮುಖ್ಯರಸ್ತೆಗಳೇ ಕತ್ತಲೆಯಿಂದ ಕೂಡಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಅಣುಕಿಸುವಂತಿದೆ.

ಪಟ್ಟಣದ ಹಲವು ವಾರ್ಡ್‌ಗಳ ಮುಖ್ಯರಸ್ತೆಗಳು, ವಸತಿ ನಿಲಯಗಳಿಗೆ ಹೋಗುವ ರಸ್ತೆಗಳು ಕತ್ತಲಲ್ಲಿ ಮುಳುಗಿದ್ದು, ಸಾರ್ವಜನಿಕರು ರಾತ್ರಿ ಸಮಯದಲ್ಲಿ ಓಡಾಡಲು ಭಯ ಪಡುವಂತಹ ಸ್ಥಿತಿ ಎದುರಾಗಿದೆ.

ಬೋಕಿಕೆರೆಯಿಂದ ಹೊಸದುರ್ಗ ಸಂಪರ್ಕಿಸುವ ರಸ್ತೆಯಲ್ಲಿ ನ್ಯಾಯಾಲಯ, ಅಗ್ನಿಶಾಮಕ ಠಾಣೆ ಹಾಗೂ ಸಾರ್ವಜನಿಕ ಆಸ್ಪತ್ರೆಯಿದೆ. ರಾತ್ರಿ ಸಮಯದಲ್ಲಿ ಈ ಮಾರ್ಗದಲ್ಲಿ ಬೆಳಕಿಲ್ಲ. ಕಡೆ ಪಕ್ಷ ವೃತ್ತಗಳಲ್ಲಿಯೂ ಬೆಳಕಿನ ವ್ಯವಸ್ಥೆಯಿಲ್ಲ. ಹಿರಿಯೂರು ವೃತ್ತದ ಸಮೀಪ ಮಹಿಳೆಯರ ವಸತಿ ನಿಲಯಗಳಿವೆ. ವಿಶೇಷ ತರಗತಿಗಳಿಗೆ ತೆರಳಿದ್ದ ವಿದ್ಯಾರ್ಥಿಗಳು ಅಥವಾ ಪರ ಊರುಗಳಿಂದ ಬರುವವರಿಗೆ ಕತ್ತಲಲ್ಲಿ ಬರುವುದು ತೊಂದರೆಯಾಗುತ್ತದೆ. ಈ ಭಾಗದಲ್ಲಿ ಬೀದಿನಾಯಿಗಳ ಹಾವಳಿಯೂ ಹೆಚ್ಚಿದೆ. ಎದುರಿಗೆ ಬರುವ ವಾಹನಗಳು ಕಾಣದಷ್ಟು ಕತ್ತಲೆ ಆವರಿಸಿರುತ್ತದೆ. ಕೆಲವೊಮ್ಮೆ ಅಪಘಾತಗಳೂ ಸಂಭವಿಸಿದ್ದುಂಟು.

ADVERTISEMENT

ಆಸ್ಪತ್ರೆ ರಸ್ತೆಯಲ್ಲಿ ಬೆಳಕಿಲ್ಲ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಎಲ್ಲಿಯೂ ವಿದ್ಯುತ್ ದೀಪಗಳಿಲ್ಲ. ಕತ್ತಲಾದರೆ ರೋಗಿಗಳಿಗೆ ಹಾಗೂ ಅವರನ್ನು ಕರೆತರುವ ಸಂಬಂಧಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇಲ್ಲೊಂದು ಆಸ್ಪತ್ರೆ ಇದೆ ಎಂಬುದೇ ಗೊತ್ತಾಗದಂತಾಗಿದೆ. ಒಳರೋಗಿಗಳ ಸಂಬಂಧಿಕರು ರಾತ್ರಿ ಊಟಕ್ಕೆ ಹೊರಗೆ ಹೋಗಬೇಕೆಂದರೂ ಸರಿಯಾದ ದಾರಿ ಕಾಣಲು ಮೊಬೈಲ್ ಫೋನ್ ಬೆಳಕನ್ನು ಅವಲಂಬಿಸಿದ್ದಾರೆ. ಇನ್ನೂ ಕೆಲವರು ಕತ್ತಲಾಗುವ ಮುನ್ನ ಊಟ ಮುಗಿಸಿಕೊಂಡು, ಆಸ್ಪತ್ರೆ ಒಳಗೆ ಹೋಗುತ್ತಿದ್ದಾರೆ. ಈ ಮಾರ್ಗದಲ್ಲಿಯೂ ಶೀಘ್ರ ವಿದ್ಯುತ್ ದೀಪಗಳ ವ್ಯವಸ್ಥೆಯಾಗಬೇಕು ಎಂಬುದು ಸ್ಥಳೀಯರ ಕೋರಿಕೆಯಾಗಿದೆ.

ರಾತ್ರಿ ಎದುರಿಗೆ ಬರುವ ವಾಹನಗಳು ಸೂಸುವ ಪ್ರಖರ ಬೆಳಕಿನಿಂದ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ಶಾಲೆ– ಕಾಲೇಜು, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಕಚೇರಿಗಳು, ಚಿತ್ರಮಂದಿರ, ವಾಣಿಜ್ಯ ಮಳಿಗೆಗಳು, ಕೆ.ಎಸ್.ಆರ್.ಟಿ.ಸಿ. ಬಸ್‌ ಡಿಪೊ, ಎಪಿಎಂಸಿ ಇರುವ ಪ್ರಮುಖ ರಸ್ತೆಗಳಲ್ಲಿಯೇ ಕನಿಷ್ಠ ಬೀದಿ ದೀಪಗಳ ಸೌಲಭ್ಯ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹೊಸದುರ್ಗ ಪಟ್ಟಣದ ಟಿ.ಬಿ ವೃತ್ತದಲ್ಲಿ ಬೆಳಕು ಇಲ್ಲದಿರುವುದು

‘ರಸ್ತೆ ಕಾಮಗಾರಿ ವೇಳೆ ಟಿ.ಬಿ. ವೃತ್ತದಲ್ಲಿನ ಹೈಮಾಸ್ಟ್ ವಿದ್ಯುತ್ ದೀಪ ತೆರವುಗೊಳಿಸಲಾಗಿತ್ತು. ಇದುವರೆಗೂ ಅಳವಡಿಸಿಲ್ಲ. ಗಾಂಧಿ ವೃತ್ತದ ಹೈಮಾಸ್ಟ್ ವಿದ್ಯುತ್ ದೀಪದಲ್ಲಿ ಒಂದೇ ದೀಪ ಬೆಳಕು ನೀಡುತ್ತಿದ್ದು, ಮಂದ ಬೆಳಕಿದೆ. ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ; ಎಂದು ಪಟ್ಟಣದ ನಿವಾಸಿ ಗುರುಪ್ರಸಾದ್ ಬೇಸರ ವ್ಯಕ್ತಪಡಿಸಿದರು.

‘ಗಣೇಶ ಚತುರ್ಥಿಯಿಂದ ದಸರಾವರೆಗೂ ಅಲಂಕಾರಕ್ಕಾಗಿ ವಿದ್ಯುತ್ ದೀಪಗಳ ವ್ಯವಸ್ಥೆ ಇರುತ್ತದೆ. ಈ ದಿನಗಳಲ್ಲಿ ಮಾತ್ರ ಮುಖ್ಯ ರಸ್ತೆಯಲ್ಲಿ ಬೆಳಕು ಕಾಣಸಿಗುತ್ತದೆ. ಹಿರಿಯೂರು ರಸ್ತೆಯಲ್ಲಿ ಬಿಸಿಎಂ ವಸತಿ ನಿಲಯಗಳಿವೆ. ಇಲ್ಲಿ ಬೀದಿದೀಪಗಳ ಸೌಲಭ್ಯವಿಲ್ಲ. ಸಮೀಪದಲ್ಲಿಯೇ ಸ್ಮಶಾನವಿದೆ. ಜನರು ಓಡಾಡಲು ಅಂಜುವಂತಾಗಿದೆ’ ಎಂದು ವಿದ್ಯಾರ್ಥಿನಿ ಕೋಮಲ ಆತಂಕ ವ್ಯಕ್ತಪಡಿಸಿದರು.

ವಿದ್ಯುತ್ ದೀಪ ಅಳವಡಿಸಿದ್ದು, ಬೆಳಕಿನ ಸೌಲಭ್ಯ ಕಲ್ಪಿಸಲು ಇನ್ನೂ ಮುಹೂರ್ತ ಕೂಡಿಬಂದಂತೆ ಕಾಣುತ್ತಿಲ್ಲ. ವಿದ್ಯುತ್ ಸಂಪರ್ಕ ನೀಡಲು ಇರುವ ಅಡೆತಡೆಗಳನ್ನು ನಿವಾರಿಸಿ ಬೆಳಕು ಹರಿಸುವ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.

ಜಾಫರ್ ಸಾದಿಕ್
ಮದಕರಿ ನಾಯಕ ವೃತ್ತ ಕಲ್ಲೇಶ್ವರ ಟಾಕೀಸ್‌ವರೆಗೂ ವಿದ್ಯುತ್ ದೀಪಗಳಿಲ್ಲ. ಟಿ.ಬಿ. ವೃತ್ತ ಸೇರಿದಂತೆ ಪ್ರಮುಖ ರಸ್ತೆ ಹಾಗೂ ಎಲ್ಲಾ ವಾರ್ಡ್‌ಗಳಲ್ಲಿಯೂ ವಿದ್ಯುತ್ ಇಲ್ಲ. ವಿದ್ಯುತ್ ದೀಪಗಳ ನಿರ್ವಹಣೆ ಸರಿಯಾಗಿಲ್ಲ. ಇದರಿಂದಾಗಿ ಕಳ್ಳತನ ಹೆಚ್ಚಾಗಿದೆ.
ಜಾಫರ್ ಸಾದಿಕ್ ಎಚ್.ಆರ್. ಪುರಸಭೆ ಸದಸ್ಯ 
230 ವಿದ್ಯುತ್ ದೀಪಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಪ್ರತಿ ವಾರ್ಡ್‌ನಲ್ಲಿ 9 ದೀಪಗಳನ್ನೂ ಮುಖ್ಯರಸ್ತೆ ಹಾಗೂ ವೃತ್ತಗಳಿಗೆ ಇನ್ನುಳಿದ ದೀಪಗಳನ್ನೂ ಶೀಘ್ರದಲ್ಲೇ ಅಳವಡಿಸಲಾಗುವುದು
ನಾಗಭೂಷಣ್ ಎನ್. ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.