ADVERTISEMENT

ಚಿತ್ರದುರ್ಗ: ದೊರೆಸ್ವಾಮಿ ಅಗಲಿಕೆಗೆ ಮಠಾಧೀಶರ ಕಂಬನಿ

​ಪ್ರಜಾವಾಣಿ ವಾರ್ತೆ
Published 26 ಮೇ 2021, 15:17 IST
Last Updated 26 ಮೇ 2021, 15:17 IST
ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ಎಚ್‌.ಎಸ್‌.ದೊರೆಸ್ವಾಮಿ ಅವರು ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದಿದ್ದರು.
ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ಎಚ್‌.ಎಸ್‌.ದೊರೆಸ್ವಾಮಿ ಅವರು ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದಿದ್ದರು.   

ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ನಿಧನಕ್ಕೆ ಮಠಾಧೀಶರು ಕಂಬನಿ ಮಿಡಿದಿದ್ದಾರೆ. ಗಾಂಧಿವಾದಿಯ ಕೊಡುಗೆಯನ್ನು ಅನೇಕ ಸಂಘ–ಸಂಸ್ಥೆಗಳು ಸ್ಮರಿಸಿವೆ.

‘ಭೂ ಚಳವಳಿ, ನೀರಿನ ಹಕ್ಕಿಗಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದರು. ನಾಡು – ನುಡಿಯ ಸೇವೆಯನ್ನು ಮಾಡಿ ನಮ್ಮನ್ನೆಲ್ಲ ಅಗಲಿದ್ದರಿಂದ ನಾಡು ಬಡವಾಗಿದೆ. ಅವರ ಆದರ್ಶ ಜೀವನ ಮತ್ತು ಜನಪರ ಕಾಳಜಿಯನ್ನು ಗುರುತಿಸಿ 2017ರಲ್ಲಿ ‘ಮುರುಘಾಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದ್ದಾರೆ.

‘ದೊರೆಸ್ವಾಮಿ ಅವರ ನಿಧನದಿಂದ ಜನಪರ ಹೋರಾಟ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ. ಸಾಮಾಜಿಕ ಬದ್ಧತೆ, ನಿರಂತರ ಎಚ್ಚರ, ಸಕ್ರಿಯವಾಗಿ ಸಮಕಾಲೀನ ಆಡಳಿತ ಯಂತ್ರದ ಲೋಪಗಳ ವಿರುದ್ಧ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಿದ್ದರು. ನೇರ, ನಿಷ್ಠುರ ವ್ಯಕ್ತಿತ್ವದ ದೊರೆಸ್ವಾಮಿ ನೋಡಿದಾಗಲೆಲ್ಲ ಇವರೇ ನಮ್ಮ ನಡುವಿನ ಗಾಂಧಿ ಎನ್ನುವಂತೆ ಭಾಸವಾಗುತ್ತಿತ್ತು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ.

ADVERTISEMENT

ಎಚ್.ಎಸ್.ದೊರೆಸ್ವಾಮಿ ಅವರ ನಿಧನಕ್ಕೆ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಪ್ಪಟ ದೇಶಪ್ರೇಮಿ, ವೀರ ಸ್ವಾತಂತ್ರ್ಯ ಸೇನಾನಿ, ಜನಪರ ಚಳುವಳಿಗಳ ನೇತಾರರನ್ನು ನಾಡು ಕಳೆದುಕೊಂಡಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿಯೂ ಆಗಿರುವ ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ತಿಳಿಸಿದ್ದಾರೆ.

‘ಗಾಂಧಿ ಯುಗದ ಕೊಂಡಿಯೊಂದು ಕಳಚಿದಂತೆ ಆಗಿದೆ. ವಿಭಿನ್ನ ಬಣಗಳಾಗಿ ಮಾರ್ಪಟ್ಟಿರುವ ರೈತ ಸಂಘಟನೆಯನ್ನು ಒಟ್ಟಿಗೆ ತರುವ ಕೆಲಸಕ್ಕೆ ಅವರು ಕೈ ಹಾಕಿದ್ದರು. ಎಲ್ಲ ಮುಖ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಕೇಂದ್ರ ಸರ್ಕಾರ ರೈತ ವಿರೋಧಿ ಕರಾಳ ಕಾನೂನುಗಳ ಜಾರಿಗೆ ತಂದಿರುವ ಬಗ್ಗೆ ಈ ಇಳಿ ವಯಸ್ಸಿನಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದರು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ.ಶಂಕರಪ್ಪ ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.