ADVERTISEMENT

ಹಿರಿಯರ ಅನುಭವದ ಮಾತು ಆಲಿಸಿ: ನ್ಯಾಯಾಧೀಶ ಎಂ.ವಿಜಯ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 7:02 IST
Last Updated 30 ಅಕ್ಟೋಬರ್ 2025, 7:02 IST
ಚಿತ್ರದುರ್ಗದ ಜಿಲ್ಲಾ ಕ್ರೀಡಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂತರ-ಪೀಳಿಗೆಯ ಬಾಂಧವ್ಯ ಮೇಳ
ಚಿತ್ರದುರ್ಗದ ಜಿಲ್ಲಾ ಕ್ರೀಡಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂತರ-ಪೀಳಿಗೆಯ ಬಾಂಧವ್ಯ ಮೇಳ   

ಚಿತ್ರದುರ್ಗ: ‘ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ತಂತ್ರಜ್ಞಾನದ ಪ್ರಭಾವದಿಂದ ಹಿರಿಯರು ಮತ್ತು ಕಿರಿಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾ ಭವನದಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಿಂದ ಆಯೋಜಿಸಿದ್ದ ಅಂತರ– ಪೀಳಿಗೆಯ ಬಾಂಧವ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ಭೌತಿಕ ಹಾಗೂ ಐಹಿಕ ಸುಖಗಳಿಗೆ ಕಿರಿಯರು ಮಾರು ಹೋಗುತ್ತಿದ್ದಾರೆ. ಇದನ್ನು ತೊರೆದು ಹಿರಿಯರ ಅನುಭವದ ಮಾತುಗಳನ್ನು ಆಲಿಸಬೇಕು’ ಎಂದು ಸಲಹೆ ನೀಡಿದರು.

‘ಜೀವನದಲ್ಲಿ ಉತ್ತಮ ಮೌಲ್ಯ ಹಾಗೂ ಸಂಸ್ಕಾರ ರೂಢಿಸಿಕೊಳ್ಳಬೇಕು. ವಿವಿಧ ತಲೆಮಾರುಗಳ ಪೀಳಿಗೆಯವರು ಹೇಗೆ ಸಾಮರಸ್ಯದಿಂದ ಬಾಳಬೇಕು ಎಂಬುದಕ್ಕೆ ಅವಿಭಕ್ತ ಕುಟುಂಬ ಮಾದರಿಯಾಗಿವೆ. ಜಾಗತಿಕವಾಗಿ ತಂತ್ರಜ್ಞಾನ ಆವರಿಸದ ಕಾಲದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚಿತ್ತು. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಕರುಣೆ, ವಾತ್ಸಲ್ಯ, ತಾಳ್ಮೆ, ಸಂಯಮದಿಂದ ಬಾಳುತ್ತಿದ್ದರು’ ಎಂದು ಹೇಳಿದರು.

ADVERTISEMENT

‘ಅವಿಭಕ್ತ ಕುಟುಂಬಗಳಲ್ಲಿ ಕಿರಿಯರಿಗೆ ಹಿರಿಯರ ಮಾರ್ಗದರ್ಶನ ದೊರಕುತ್ತಿತ್ತು. ಸಂಸ್ಕೃತಿ, ಸಂಪ್ರದಾಯ, ಆರೋಗ್ಯಯುತವಾದ ಜೀವನ, ಉತ್ತಮ ಮೌಲ್ಯಗಳು ಬಳುವಳಿಯಾಗಿ ದೊರಕುತ್ತಿದ್ದವು. ಎಲ್ಲ ವಯೋಮಾನದವರು ಪ್ರೀತಿ, ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯಿಂದ ಬದುಕು ಸಾಗಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ’ ಎಂದರು.

‘ಮಕ್ಕಳ ಶ್ರಯೋಭಿವೃದ್ಧಿಯಲ್ಲಿ ಹಿರಿಯರ ಶ್ರಮ ಶ್ಲಾಘನಿಯವಾದದ್ದು. ತಂತ್ರಜ್ಞಾನ ಬದಲಾದಂತೆ ಮಾನವೀಯ ಸಂಬಂಧಗಳ ಸ್ವರೂಪವೂ ಬದಲಾಗುತ್ತಿದೆ. ಮನುಷ್ಯ ಸಂಬಂಧಗಳು ಕೂಡ ಪ್ಲಾಸ್ಟಿಕ್‌ ರೀತಿ ಬಳಸಿ ಬಿಸಾಡುವ ಸ್ಥಿತಿಗೆ ತಲುಪಿವೆ. ತ್ರಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡದೆ ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯದಿಂದ ಬಾಳಬೇಕು’ ಎಂದು ಉಪವಿಭಾಗಾಧಿಕಾರಿ ಮೆಹಬೂಬ್‌ ಜಿಲಾನಿ ಖುರೇಷಿ ಹೇಳಿದರು.

ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರೀಕರ ರಕ್ಷಣಾ ಕಾಯ್ದೆ– 2007ರ ಕುರಿತು ಕಾನೂನು ನೆರವು ಅಭಿರಕ್ಷ ಎಂ.ಮೂರ್ತಿ, ನಮ್ಮ ಹಿರಿಯರು ನಮ್ಮ ಆದರ್ಶ ವಿಷಯದ ಕುರಿತು ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಉಪನ್ಯಾಸ ನೀಡಿದರು.

ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಡಿ.ನಾಗಭೂಷಣ್‌, ಜಿ.ಎಸ್‌.ಉಜ್ಜಿನಪ್ಪ, ಪಿ.ತಿಪ್ಪೇಸ್ವಾಮಿ, ಬಿ.ರಾಜಶೇಖರ್‌, ರಮಾದೇವಿ, ಪ್ರೊ.ಎಚ್‌.ಲಿಂಗಪ್ಪ, ಎನ್‌.ವೆಂಕಟಸ್ವಾಮಿ, ಪಿ.ಯಶೋಧ, ಗಾಯತ್ರಿ ಶಿವರಾಂ ಅವರನ್ನು ಸನ್ಮಾನಿಸಲಾಯಿತು.

ವಕೀಲರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಚ್‌.ಎಸ್‌.ಮಹೇಶ್ವರಪ್ಪ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್‌, ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಇದ್ದರು.

ಗೌರವ ಪ್ರೀತಿ ಹಾಗೂ ಕಾಳಜಿ ಇರುವ ಸಮಾಜ ಉತ್ತಮ ಸಂಸ್ಕೃತಿಯಿಂದ ಕೂಡಿರುತ್ತದೆ. ಮನುಷ್ಯ ಹುಟ್ಟಿನಿಂದ ಮುಪ್ಪಿನವರೆಗೂ ನೆಮ್ಮದಿ ಜೀವನ ನಡೆಸಲು ಎಲ್ಲರಿಗೂ ಸಂವಿಧಾನದ ಕಾನೂನಿನಡಿ ಅವಕಾಶವಿದೆ
ಡಾ.ರಂಗಸ್ವಾಮಿ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.