ADVERTISEMENT

ಸಮೀಕ್ಷೆ ಎಲ್ಲ ಜಾತಿ ಪ್ರಗತಿಗೆ ಬುನಾದಿ: ಆಂಜನೇಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 6:20 IST
Last Updated 7 ಅಕ್ಟೋಬರ್ 2025, 6:20 IST
ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸಮಯದಲ್ಲಿ ಮಾಜಿ ಸಚಿವ ಎಚ್‌. ಆಂಜನೇಯ ಅವರು ಭಾಗವಹಿಸಿದ್ದರು. ಮುಖಂಡರು ಹಾಗೂ ಸಮೀಕೆಯ ಅಧಿಕಾರಿಗಳು ಇದ್ದರು.
ಚಿಕ್ಕಜಾಜೂರು ಸಮೀಪದ ಬಿ. ದುರ್ಗ ಗ್ರಾಮದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸಮಯದಲ್ಲಿ ಮಾಜಿ ಸಚಿವ ಎಚ್‌. ಆಂಜನೇಯ ಅವರು ಭಾಗವಹಿಸಿದ್ದರು. ಮುಖಂಡರು ಹಾಗೂ ಸಮೀಕೆಯ ಅಧಿಕಾರಿಗಳು ಇದ್ದರು.   

ಚಿಕ್ಕಜಾಜೂರು: ‘ರಾಜ್ಯದಲ್ಲಿ ಆರಂಭವಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಾಡಿನ ಪ್ರಗತಿಗೆ ಬುನಾದಿ ಆಗಲಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ತಿಳಿಸಿದರು.

ಸಮೀಪದ ಬಿ.ದುರ್ಗದಲ್ಲಿ ಸಮೀಕ್ಷೆಯ ಗಣತಿದಾರರೊಂದಿಗೆ ಮನೆ ಮನೆಗೆ ಭೇಟಿ ನೀಡಿದ ಬಳಿಕ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಯಾವ ಯಾವ ಸಮುದಾಯ ಎಷ್ಟು ಸಂಖ್ಯೆಯಲ್ಲಿದೆ, ಅವರು ಯಾವ ಮಟ್ಟದಲ್ಲಿ ಹಿಂದುಳಿದಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ, ಅವರ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಸಮೀಕ್ಷೆ ಕಾರ್ಯ ಸಹಕಾರಿ ಆಗಲಿದೆ’ ಎಂದರು.

‘ಈ ಸಮೀಕ್ಷೆ ಕುರಿತು ಅಪಸ್ವರ, ಅಸಡ್ಡೆ ಮಾತುಗಳು ನೊಂದ ಜನರ ಬದುಕಿಗೆ ಕಂಟಕವಾಗಲಿವೆ. ಆದ್ದರಿಂದ ಈ ವಿಷಯದಲ್ಲಿ ಪಕ್ಷಾತೀತವಾಗಿ ಒಗ್ಗೂಡಿ, ಬದ್ಧತೆಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿದೆ. ಎಲ್ಲ ಪಕ್ಷಗಳ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ಲಿಂಗಾಯತ, ಕುಂಚಿಟಿಗ, ಗೊಲ್ಲರು, ಮಾದಿಗರು, ಕುರುಬರು, ಬ್ರಾಹ್ಮಣರು ಸೇರಿ ಎಲ್ಲ ಜಾತಿಗಳಲ್ಲೂ ಬಡವರು ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಈ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಸಮೀಕ್ಷೆ ಬುನಾದಿ ಆಗಲಿದೆ ಎಂಬ ಸತ್ಯ ಅರಿತುಕೊಳ್ಳಬೇಕು’ ಎಂದರು.

‘ಕುಟುಂಬದ ಸದಸ್ಯರ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಅರಿತರೆ ಮಾತ್ರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಲು ಸಾಧ್ಯ. ಇಲ್ಲದಿದ್ದರೆ ಮೀಸಲಾತಿ, ಸರ್ಕಾರಿ ಸೌಲಭ್ಯಗಳು ಬಡ ಜನರಿಗೆ ತಲುಪಲು ಕಷ್ಟವಾಗಲಿದೆ’ ಎಂದು ತಿಳಿಸಿದರು.

‘ಸರ್ಕಾರಿ ಯೋಜನೆಗಳನ್ನು ಅರ್ಹ ಜಾತಿಯವರಿಗೆ ಜಾರಿಗೆ ತರಲು ನ್ಯಾಯಾಲಯ ಹಲವು ಪ್ರಶ್ನೆಗಳನ್ನು ಸಹ ಕೇಳಿದೆ. ನ್ಯಾಯಾಲದ ಎಲ್ಲ ಪ್ರಶ್ನೆಗಳಿಗೆ ಈ ಸಮೀಕ್ಷೆ ಕಾರ್ಯ ಉತ್ತರ ನೀಡುವುದರ ಜತೆ, ರಾಜ್ಯದ ಸರ್ವ ಸಮುದಾಯಗಳ ಪ್ರಗತಿಗೆ ಆಧಾರವಾಗಲಿದೆ. ಈ ವಿಷಯದಲ್ಲಿ ಯಾವುದೇ ಪಕ್ಷದ ಮುಖಂಡರು ವಿನಾಕಾರಣ ರಾಜಕಾರಣ ಮಾಡದೆ ತಮ್ಮ ಜಾತಿಗಳಲ್ಲಿನ ಸಮೀಕ್ಷೆಯಲ್ಲಿ ಸಮರ್ಥವಾಗಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸಮೀಕ್ಷೆ ವೇಳೆ 60 ಪ್ರಶ್ನೆಗಳಲ್ಲಿ ಕೆಲವುಗಳಿಗೆ ಕಡಿವಾಣ ಹಾಕಬಹುದಿತ್ತು. ಮತದಾರರ ಚೀಟಿ, ಜನನ ಪ್ರಮಾಣ ಪತ್ರ ಕೇಳುವುದು ಅನಗತ್ಯ. ಪರಿಣಾಮ ಜನಸಂಖ್ಯೆ ಕಡಿಮೆ ದಾಖಲಾಗುವ ಆತಂಕ ಇದೆ. ಆದ್ದರಿಂದ ಆಯೋಗ ಇದನ್ನು ಗಮನಿಸಿ, ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಟಿ.ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮಾಜಿ ಸದಸ್ಯ ರಂಗಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಂ.ಕೆ. ರುದ್ರಪ್ಪ, ಯುವ ಘಟಕದ ಅಧ್ಯಕ್ಷ ಚೇತನಕುಮಾರ್ ಬೋರೇನಹಳ್ಳಿ, ಮುಖಂಡರಾದ ಗಿರಿಜಮ್ಮ ಬಸವರಾಜ್, ಸಾಸಲು ದೇವರಾಜ್, ಕೆ.ಸಿ.‌ ಪುರುಷೋತ್ತಮ್, ಹನುಮಂತಪ್ಪ ಗೋಡೆಮನೆ, ಪ್ರಕಾಶ್, ಬಸವರಾಜ್, ಸಂಗನಗುಂಡಿ ಮಂಜಣ್ಣ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.