ADVERTISEMENT

ಗಮಕ ಉಳಿಯಲು ಕಲಿಕಾಸಕ್ತರನ್ನು ಹೆಚ್ಚಿಸಿ: ಡಾ.ಎ.ವಿ. ಪ್ರಸನ್ನ ಸಲಹೆ

ಕನ್ನಡದ ಮಹಾಕವಿ ಕುಮಾರವ್ಯಾಸ ಜಯಂತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 12:00 IST
Last Updated 18 ಜನವರಿ 2020, 12:00 IST
ಚಿತ್ರದುರ್ಗದಲ್ಲಿ ಶನಿವಾರ ನಡೆದ ಕನ್ನಡದ ಮಹಾಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಖ್ಯಾತ ಗಮಕ ವ್ಯಾಖ್ಯಾನಕಾರ ಡಾ.ಎ.ವಿ. ಪ್ರಸನ್ನ ಉದ್ಘಾಟಿಸಿದರು. ಗಂಗಮ್ಮ ಕೇಶವಮೂರ್ತಿ, ಪಿ.ಎಸ್. ಮಂಜುನಾಥ ಇದ್ದರು.
ಚಿತ್ರದುರ್ಗದಲ್ಲಿ ಶನಿವಾರ ನಡೆದ ಕನ್ನಡದ ಮಹಾಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಖ್ಯಾತ ಗಮಕ ವ್ಯಾಖ್ಯಾನಕಾರ ಡಾ.ಎ.ವಿ. ಪ್ರಸನ್ನ ಉದ್ಘಾಟಿಸಿದರು. ಗಂಗಮ್ಮ ಕೇಶವಮೂರ್ತಿ, ಪಿ.ಎಸ್. ಮಂಜುನಾಥ ಇದ್ದರು.   

ಚಿತ್ರದುರ್ಗ: ‘ಗಮಕ ಕಲೆ ಉಳಿಯಬೇಕು. ಅದನ್ನು ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ಕಲಿಕಾಸಕ್ತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕಾದ ಅಗತ್ಯವಿದೆ’ ಎಂದು ಖ್ಯಾತ ಗಮಕ ವ್ಯಾಖ್ಯಾನಕಾರ ಡಾ.ಎ.ವಿ. ಪ್ರಸನ್ನ ಸಲಹೆ ನೀಡಿದರು.

ಶಾರದಾ ಸಭಾ ಭವನದಲ್ಲಿ ಶನಿವಾರ ರಾಜ್ಯ ಗಮಕ ಕಲಾ ಪರಿಷತ್ತು, ಗಮಕ ಕಲಾಭಿಮಾನಿಗಳ ಸಂಘ, ಬ್ರಾಹ್ಮಣ ಸಂಘದಿಂದ ಕನ್ನಡದ ಮಹಾಕವಿ ಕುಮಾರವ್ಯಾಸ ಜಯಂತಿ ಅಂಗವಾಗಿ ಆಯೋಜಿಸಿದ್ದ ಕುಮಾರವ್ಯಾಸ ಭಾರತದ ಆದಿಪರ್ವದ 7ನೇ ಮತ್ತು 8ನೇ ಸಂಧಿಯ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ, ಸಾಹಿತ್ಯ ಸಮಾರಾಧನೆ ಉದ್ಘಾಟಿಸಿ ಮಾತನಾಡಿದರು.

‘ಗಮಕ ಕಲೆಗೆ ದೊಡ್ಡ ಸೇವೆ ನೀಡುವುದೆಂದರೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದು. ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಅದರ ಪ್ರಗತಿಗೆ ನಾವೆಲ್ಲರೂ ಶ್ರಮಿಸಬೇಕಿದೆ. ಈ ಮೂಲಕ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರು, ಗಮಕ ಆಸಕ್ತರು ಇರುವುದರಿಂದ ಅವುಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಸಾಹಿತ್ಯದ ಸ್ವಾರಸ್ಯಗಳನ್ನು ಗಮಕದಿಂದ ಮಾತ್ರ ತಿಳಿಯಲು ಸಾಧ್ಯ’ ಎಂದು ಹೇಳಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್. ಮಂಜುನಾಥ, ‘ರಾಜ್ಯದ ಮಧ್ಯಭಾಗದಲ್ಲಿ ಇರುವ ಚಿತ್ರದುರ್ಗ ಬರಪೀಡಿತ ಜಿಲ್ಲೆ. ಇಲ್ಲಿ ಶ್ರೀಮಂತರ ಸಂಖ್ಯೆ ಕಡಿಮೆ ಇರಬಹುದು. ಆದರೆ, ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿನ ಜನ ಸಿರಿವಂಥರಾಗಿದ್ದಾರೆ’ ಎಂದ ಅವರು, ‘ಗಮಕ ಪರಿಷತ್ತಿಗೆ ಸ್ವಂತ ಕಟ್ಟಡವಾಗಲಿ, ಭವನವಾಗಲಿ ಇಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ ಕೂಡ ಗಮಕ ಕಲೆಗೆ ಪ್ರೋತ್ಸಾಹ ನೀಡಲು ಅನುದಾನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಗಮಕ ಕಲಾ ಪರಿಷತ್ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ‘ಗಮಕ ಕಲಾ ಪರಿಷತ್ತು ರಾಜ್ಯದ ಎಲ್ಲ ಅಭಿಮಾನಿಗಳ ಸಹಕಾರದಿಂದ ನಡೆಯುತ್ತಿದೆ. ಆದರೂ ಪ್ರಸ್ತುತ ದಿನಗಳಲ್ಲಿ ಹಿಂದಿನಂತೆ ವಿದ್ಯಾರ್ಥಿಗಳ ಸಂಖ್ಯೆ ಇಲ್ಲ. ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಮಹಾನಗರಗಳಲ್ಲಿ ಗಮಕ ಕಲಿಸುವ ಶಿಕ್ಷಕರ ಕೊರತೆಯೂ ಇದೆ. ವಿದ್ಯಾರ್ಥಿಗಳೇ ಇಲ್ಲದಿದ್ದಾಗ ಗಮಕ ಪರೀಕ್ಷೆ ನಡೆಸಲು ಹೇಗೆ ಸಾಧ್ಯ’.‘ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕು. ಆಗ ಮಾತ್ರ ಈ ಕಲೆ ಉಳಿಯಲು ಸಾಧ್ಯ. ಆದ್ದರಿಂದ ರಾಜ್ಯದ ಯಾವುದೇ ಮೂಲೆಗೆ ಬೇಕಾದರೂ ನಾನೂ ಹೋಗಿ ಕಲಿಸಲು ಆಸಕ್ತಿ ತೋರುವ ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಸಿದ್ಧ’ ಎಂದರು.

ಚಿತ್ರದುರ್ಗ ಗಮಕ ಕಲಾ ಪರಿಷತ್ತು ಅಧ್ಯಕ್ಷೆ ಕೆ.ಆರ್. ರಮಾದೇವಿ, ಜಿಲ್ಲಾ ಪ್ರತಿನಿಧಿ ಡಾ.ಕೆ. ರಾಜೀವಲೋಚನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.