ಮೊಳಕಾಲ್ಮುರು: ‘ಈ ಹಿಂದೆ ಇಲ್ಲಿ ಶ್ರೀರಾಮುಲು ಶಾಸಕರಾಗಿದ್ದಾಗ ಅವರಿಗೆ ಎಷ್ಟು ಜನ ಪಿಎಗಳು ಇದ್ದರು ಎಂಬುದನ್ನು ಮೊದಲು ಹೇಳಿ, ಆ ಮೇಲೆ ನನ್ನ ಸಾಧನೆ ಬಗ್ಗೆ ಟೀಕೆ ಮಾಡಿ’ ಎಂದು ಶಾಸಕ ಎನ್.ವೈ ಗೋಪಾಲಕೃಷ್ಣ ಬಿಜೆಪಿಯವರನ್ನು ಟೀಕಿಸಿದರು.
ಪಿಎಲ್‌ಡಿ ಬ್ಯಾಂಕ್ ಬಳಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘70-80ಕ್ಕೂ ಹೆಚ್ಚು ಪಿಎಗಳು ಶ್ರೀರಾಮುಲು ಹೆಸರು ಕೇಳಿಕೊಂಡು ಜನರಿಂದ, ಗುತ್ತಿಗೆದಾರರಿಂದ ಹಣ ಪಡೆಯುತ್ತಿದರು, ಇದು ಜಗಜಹೀರು ಸಂಗತಿ. ನಾನು ಆಗ ಕೂಡ್ಲೀಗಿಯಲ್ಲಿ ಬಿಜೆಪಿ ಶಾಸಕನಾಗಿದ್ದು ಎಲ್ಲವನ್ನೂ ಕಂಡಿದ್ದೇನೆ. ಮೋಸ ಹೋದ ಗುತ್ತಿಗೆದಾರರು ನನ್ನ ಬಳಿ ಬಂದು ನೋವು ತೋಡಿಕೊಂಡಾಗ ಸಹಾಯ ಮಾಡಿದ್ದೇನೆ. ಈಗ ಇದರಲ್ಲಿನ ಇಬ್ಬರು ಪಿಎಗಳು ನಾನು ಕ್ಷೇತ್ರಕ್ಕೆ ತಂದಿರುವ ಅನುದಾನ ಬಹಿರಂಗ ಮಾಡಬೇಕು ಎಂದು ಬುಧವಾರ ನಡೆದ ಪ್ರತಿಭಟನೆಯಲ್ಲಿ ಸವಾಲು ಹಾಕಿದ್ದಾರೆ. ಶೀಘ್ರ 2 ವರ್ಷಗಳ ಅನುದಾನ ಸಾಧನೆಯನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ನೀಡಲಾಗುವುದು’ ಎಂದರು.
‘ನಾನು ವಿಧಾನಸಭಾ ಅಧಿವೇಶನಕ್ಕೆ ಹೋಗಿಯೇ ಇಲ್ಲ ಎಂದು ಟೀಕೆ ಮಾಡಿದ್ದಾರೆ. ನಾನು ಡೆಪ್ಯುಟಿ ಸ್ವೀಕರ್ ಆಗಿ ಕೆಲಸ ಮಾಡಿದ್ದೇನೆ ಎಂಬುದನ್ನು ಮೊದಲು ಅವರ ಅರ್ಥ ಮಾಡಿಕೊಳ್ಳಬೇಕು. ಇನ್ನೂ 3 ವರ್ಷ ಚುನಾವಣೆ ಇದೆ. ಆದರೆ, ಕೆಲ ಬಿಜೆಪಿ ಮುಖಂಡರು ಈಗಲೇ ಕಚೇರಿಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ಮುಂದೆ ನಾವೇ ಗೆಲ್ಲೋದು ನಾವು ಎಂದು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಶೀಘ್ರ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರ ಅವಧಿಯಲ್ಲಿನ ಆವಾಂತರಗಳನ್ನು ಬಹಿರಂಗ ಮಾಡಲಾಗುವುದು’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪ್ರಕಾಶ್, ಮುಖಂಡರಾದ ಅಬ್ದುಲ್ ಸುಬಾನ್‌ಸಾಬ್, ವಿ.ಮಾರನಾಯಕ ಮಾತನಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ಎಸ್.ಖಾದರ್, ಎಸ್.ಮಂಜಣ್ಣ, ಅಬ್ದುಲ್ಲಾ, ಲಕ್ಷ್ಮೀದೇವಿ, ದೇವದಾಸ್, ಮಹಮದ್ ಒಬೇದುಲ್ಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.