ಚಿತ್ರದುರ್ಗ: ‘ಒಳ ಮೀಸಲಾತಿ ಕುರಿತು ಸಚಿವ ಸಂಪುಟದ ಸೂತ್ರ ರಾಜಕೀಯ ಪ್ರೇರಿತವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿಗೂ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳಿಗೂ ವಿರುದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿ ಬಸವಮೂರ್ತಿ ಮಾದಾರ ಚನ್ನಯ್ಯ ಆಗ್ರಹಿಸಿದರು.
ಕಾಂಗ್ರೆಸ್‌ನಲ್ಲಿ ಒಳಮೀಸಲಾತಿ ಜಾರಿಗೆ ವಿರೋಧವಿತ್ತು. ಅದನ್ನು ನಿಭಾಯಿಸುವ ಸವಾಲು ಮುಖ್ಯಮಂತ್ರಿಗಿತ್ತು. ಆಯೋಗದ ಶಿಫಾರಸು ಪರಿಷ್ಕರಿಸಿ ಸಮ್ಮತಿ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಅಲೆಮಾರಿಗಳಿಗೆ ನ್ಯಾಯ ಸಿಗದಿದ್ದರೆ ಒಳಮೀಸಲಾತಿ ಆಶಯ ಪೂರ್ಣವಾಗುವುದಿಲ್ಲ’ ಎಂದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ‘ಮಾಹಿತಿಗಳ ಪ್ರಕಾರ ಸಂಪುಟದ ನಿರ್ಧಾರದ ಸ್ವರೂಪ ಇನ್ನೂ ಅಂತಿಮವಾಗಿಲ್ಲ. ನಿರ್ಧಾರಕ್ಕೆ ಸರ್ಕಾರದ ಅಂಕಿತವೂ ಬಿದ್ದಿಲ್ಲ. ಹೀಗಾಗಿ ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆಯೂ ಸಿ.ಎಂ ಸ್ಪಷ್ಟನೆ ನೀಡಲಿ’ ಎಂದು ಒತ್ತಾಯಿಸಿದರು.
‘ಸರ್ಕಾರ 6 , 6, 5ರ ಒಳಮೀಸಲಾತಿ ಸೂತ್ರ ಒಪ್ಪಿರುವುದು ಆಯೋಗದ ಮೂಲ ಆಶಯಕ್ಕೆ ಧಕ್ಕೆತಂದಿದೆ. ಹೊಸ ಸೂತ್ರದಲ್ಲಿ ಅತ್ಯಂತ ಹೆಚ್ಚು ಹಿಂದುಳಿದ ಅಲೆಮಾರಿ ಜಾತಿಗಳಿದ್ದ ‘ಎ’ ಪ್ರವರ್ಗವನ್ನು ಕಡಿಮೆ ಹಿಂದುಳಿದ ‘ಡಿ’ ಪ್ರವರ್ಗದ ಜೊತೆ ಏಕಪಕ್ಷೀಯವಾಗಿ ಸೇರಿಸಲಾಗಿದೆ’ ಎಂದರು.
‘ಹೆಚ್ಚಿನ ಮೀಸಲಾತಿ ಕೇಳುತ್ತಿರುವ ಬೋವಿ, ಬಂಜಾರ ಸಮುದಾಯಗಳು ಈ ಸೇರ್ಪಡೆ ಒಪ್ಪುತ್ತಿಲ್ಲ. ಅಲೆಮಾರಿ ಸಮುದಾಯಗಳು ಪ್ರತಿಭಟನೆಗೆ ಇಳಿದಿವೆ. ಜನಸಂಖ್ಯೆ ಅನುಸಾರ ನೋಡುವುದಾದರೂ ಈಗಿನ ನಿರ್ಧಾರ ಅವೈಜ್ಞಾನಿಕವಾದುದಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.