ADVERTISEMENT

ಒಳ ಮೀಸಲು ಮಸೂದೆ ಹಿಂಪಡೆಯಿರಿ; ಭೋವಿ ಶ್ರೀ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 23:55 IST
Last Updated 18 ಡಿಸೆಂಬರ್ 2025, 23:55 IST
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ   

ಚಿತ್ರದುರ್ಗ: ‘ಒಳ ಮೀಸಲಾತಿ ಮಸೂದೆಯಿಂದ ಪ್ರವರ್ಗ–3ರಲ್ಲಿ ಬರುವ ಭೋವಿ, ಬಂಜಾರ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯವಾಗಿದೆ. ಇದನ್ನು  ಹಿಂಪಡೆದು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.

‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನೀಡಿದ್ದ ಶೇ 1ರಷ್ಟು ಮೀಸಲಾತಿಯನ್ನು ಪ್ರವರ್ಗ 3ಕ್ಕೆ ಸೇರ್ಪಡೆ ಮಾಡಿ ಮೀಸಲಾತಿ ಹಂಚಿಕೆಯನ್ನೇ ಮಾರ್ಪಡಿಸಿರುವುದು ಸರಿಯಲ್ಲ. ಇದರಿಂದ ಅಲೆಮಾರಿಗಳ ಜೊತೆಗೆ ಪ್ರವರ್ಗ 3ರ ಸಮುದಾಯಗಳಿಗೂ ಅನ್ಯಾಯವಾಗಿದೆ. ಒಳಮೀಸಲಾತಿಯಲ್ಲೇ ಒಳಮೀಸಲು ನೀಡಿರುವುದು ಖಂಡನೀಯ. ನಮ್ಮ ಶಾಸಕರು, ಸಚಿವರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘1.8 ಕೋಟಿ ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಸಮುದಾಯಕ್ಕೆ ನ್ಯಾಯಯುತವಾಗಿ ಮೀಸಲಾತಿ ಸಿಗಬೇಕಾದರೆ ಅದರ ಪ್ರಮಾಣವನ್ನು ಶೇ 18ಕ್ಕೆ ಹೆಚ್ಚಿಸಬೇಕು. ಆ ಮೂಲಕ ಪ್ರವರ್ಗ–1 ಮತ್ತು 2ಕ್ಕೆ ತಲಾ ಶೇ 6, ಪ್ರವರ್ಗ–3ಕ್ಕೆ ಶೇ 5 ಹಾಗೂ ಅಲೆಮಾರಿಗಳಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಿದರೆ, ಸಮಸ್ಯೆಗೆ ಪರಿಹಾರ ಲಭಿಸಲಿದೆ. ಇದಕ್ಕಾಗಿ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಪರಿಗಣಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮೀಸಲಾತಿ ಪ್ರಮಾಣವನ್ನು ಶೇ 17ರಿಂದ 18ಕ್ಕೆ ಹೆಚ್ಚಿಸಿದರೆ ಉಂಟಾಗುವ ಸಮಸ್ಯೆ ಪರಿಹರಿಸಲು ತಮಿಳುನಾಡು ಸೇರಿ ಅನ್ಯ ರಾಜ್ಯಗಳ ಮಾದರಿ ಅನುಸರಿಸಬೇಕು. ಅಲೆಮಾರಿಗಳ ಶೇ 1ರಷ್ಟು ಮೀಸಲಾತಿಯನ್ನು ನಮ್ಮ ಜೊತೆ ಸೇರಿಸಿ ಶೇ 5ರಷ್ಟು ಮೀಸಲಾತಿ ನೀಡಿರುವುದಾಗಿ ಹೇಳುತ್ತಿದ್ದಾರೆ. ಇದನ್ನು ಒಪ್ಪಲಾಗದು. ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರವೇ ಭೇಟಿ ಮಾಡಿ ಮಸೂದೆಯನ್ನು ಪುನರ್‌ ಪರಿಶೀಲನೆಗೆ ಒಳಪಡಿಸುವಂತೆ ಕೋರುತ್ತೇವೆ. ಸಮ ಸಮಾಜ ನಿರ್ಮಾಣವು ಒಳ ಮೀಸಲಾತಿಯ ಒಟ್ಟಾರೆ ಆಶಯ. ಇದಕ್ಕೆ ವಿರುದ್ಧವಾಗಿರುವ ಮಸೂದೆಯನ್ನು ತಿರಸ್ಕರಿಸಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.