ADVERTISEMENT

ಒಳಮೀಸಲಾತಿ: ಮೊದಲ ಹಂತದ ಸಾಮಾಜಿಕ ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 5 ಮೇ 2025, 14:32 IST
Last Updated 5 ಮೇ 2025, 14:32 IST
ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಜೆ.ಸೋಮಶೇಖರ್‌, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಅವರ ಉಪಸ್ಥಿತಿಯಲ್ಲಿ ಪರಿಶಿಷ್ಟ ಜಾತಿಗಳ ಸಾಮಾಜಿಕ ಸಮೀಕ್ಷಾ ಕಾರ್ಯ ಸೋಮವಾರ ಆರಂಭಗೊಂಡಿತು 
ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಜೆ.ಸೋಮಶೇಖರ್‌, ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಅವರ ಉಪಸ್ಥಿತಿಯಲ್ಲಿ ಪರಿಶಿಷ್ಟ ಜಾತಿಗಳ ಸಾಮಾಜಿಕ ಸಮೀಕ್ಷಾ ಕಾರ್ಯ ಸೋಮವಾರ ಆರಂಭಗೊಂಡಿತು    

ಚಿತ್ರದುರ್ಗ: ಒಳಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಗಳ ಮೊದಲ ಹಂತದ ಸಾಮಾಜಿಕ ಸಮೀಕ್ಷಾ (ಜಾತಿ ಗಣತಿ) ಕಾರ್ಯ ಸೋಮವಾರ ಜಿಲ್ಲೆಯಾದ್ಯಂತ ಆರಂಭವಾಯಿತು. 1,825 ಸಿಬ್ಬಂದಿ ಕೈಗೊಳ್ಳುತ್ತಿರುವ ಸಮೀಕ್ಷೆಗೆ ನಗರದ ಐಯುಡಿಪಿ ಬಡಾವಣೆಯ ಗಾಂಧಿನಗರದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಮೀಕ್ಷಾ ಕಾರ್ಯ ಆರಂಭಿಸಿದರು. ಮೂರು ಹಂತದ ಸಮೀಕ್ಷೆ ನಡೆಯಲಿದ್ದು ಸೋಮವಾರದಿಂದ ಮೇ 17ರವರೆಗೂ ಮನೆ-ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. 2ನೇ ಹಂತದಲ್ಲಿ ಮೇ 19ರಿಂದ ಮೇ 21ರವರೆಗೆ ಬ್ಲಾಕ್‍ಗಳಲ್ಲಿ ವಿಶೇಷ ಶಿಬಿರ ಕೈಗೊಂಡು, ಮನೆ ಭೇಟಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸುವುದು. 3ನೇ ಹಂತ ಮೇ 19 ರಿಂದ ಮೇ 21ರವರೆಗೆ ಸ್ವಯಂ ಘೋಷಣೆ (ಆನ್‍ಲೈನ್ ಮೂಲಕ) ಮೂಲಕ ಮಾಹಿತಿ ಒದಗಿಸಬಹುದಾಗಿದೆ.

ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿ ‘ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಲ್ಲಾ ವರ್ಗದವರಿಗೆ ಎಲ್ಲಾ ಕಾಲದಲ್ಲಿಯೂ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ಸಮಾನತೆಯ ಪರಿಕಲ್ಪನೆ ಅನೇಕ ಶ್ರೇಷ್ಠ ಚಿಂತನಶೀಲರು ಮತ್ತು ದಾರ್ಶನಿಕರಿಂದ ಸ್ಫೂರ್ತಿ ಪಡೆದಿದೆ. ಇವರಿಂದ ಪ್ರತಿಪಾದಿಸಲ್ಪಟ್ಟ ಸಮಾನತೆಯ ತತ್ವವೆಂದರೆ ಎಲ್ಲಾ ನಾಗರಿಕರಿಗೆ ಸಮಾನ ಸ್ಥಾನಮಾನ ಹಾಗೂ ಅವಕಾಶ ನೀಡುವುದಾಗಿದೆ. ಭಾರತದ ಸಂವಿಧಾನದ 15ನೇ ಪರಿಚ್ಛೇದವು ಕುಲ, ಜಾತಿ, ಲಿಂಗ ಮತ್ತು ಜನ್ಮ ಸ್ಥಳಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಈ ನಿಟ್ಟಿನಲ್ಲಿ ಈ ಸಮೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ADVERTISEMENT

‘ಸುಪ್ರೀಂ ಕೋರ್ಟ್‌ ಕೂಡ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳ ಮೀಸಲಾತಿಯನ್ನು ನೀಡಬಹುದು ಎಂದು 2024ರ ಆ.1ರಂದು ತೀರ್ಪು ನೀಡಿದೆ. ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಮಾಡಲು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗ ರಚಿಸಿತ್ತು. ಒಳಮೀಸಲಾತಿಯನ್ನು ವರ್ಗೀಕರಿಸಲು ಸೂಚಿಸಿರುವ ಕಾರಣ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲಾಗಿದೆ’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಮಾತನಾಡಿ ‘ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ಗಣತಿಯ ಉದ್ದೇಶವಾಗಿದೆ. ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ವಾಸ್ತವಿಕ ಮಾಹಿತಿ ಪಡೆದುಕೊಂಡು ಒಳ ಮೀಸಲಾತಿಯನ್ನು ವರ್ಗೀಕರಿಸಿ ಸರ್ಕಾರಕ್ಕೆ ಶಿಫಾರಸು ಮಾಡುವುದು ಎಚ್‌.ಎನ್‌.ನಾಗಮೋಹನದಾಸ್‌ ಆಯೋಗದ ಉದ್ದೇಶವಾಗಿದೆ’ ಎಂದರು.

‘ಸಮೀಕ್ಷೆಯಿಂದ ಹೊರಹೊಮ್ಮಿದ ಅಂಶಗಳ ಆಧಾರದಲ್ಲಿ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನ ಅಧ್ಯಯನ ಮಾಡಿ ಒಳಮೀಸಲಾತಿ ವರ್ಗೀಕರಣವನ್ನು ಮಾಡಲಾಗುತ್ತದೆ. ಒಳಮೀಸಲಾತಿ ಜಾರಿ ಸಂಬಂಧ ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿ, ಅಗತ್ಯ ಸಹಕಾರ ನೀಡುವುದು ಅಗತ್ಯ. ಆ ಮೂಲಕ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸಿ, ಒಳ ಮೀಸಲಾತಿಯ ಹಂಚಿಕೆಗೆ ಸಹಕರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಉಪಸ್ಥಿತರಿದ್ದರು.

ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಮೊಬೈಲ್ ಆ್ಯಪ್ ಮೂಲಕ ದತ್ತಾಂಶ ಸಂಗ್ರಹಿಸುವ ಕಾರ್ಯ ಆರಂಭಗೊಂಡಿತು. ಸಮೀಕ್ಷಾ ಕಾರ್ಯ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ 3 ಮಾಸ್ಟರ್ ಟ್ರೇನರ್ಸ್‍ಗ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿ ತಾಲ್ಲೂಕಿನಿಂದ 5ರಂತೆ ಒಟ್ಟು 30 ತಾಲ್ಲೂಕು ಮಾಸ್ಟರ್ಸ್ ಟ್ರೇನರ್ಸ್‍ಗಳು 1661 ಗಣತಿದಾರರು 164 ಮೇಲ್ಚಿಚಾರಕರು ಸೇರಿ ಒಟ್ಟು 1825 ಸಿಬ್ಬಂದಿ ತಮ್ಮ ಚಟುವಟಿಕೆ ಆರಂಭಿಸಿದರು. ಸಮಗ್ರ ಮೇಲ್ಚಿಚಾರಣೆಗೆ ತಾಲ್ಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ 6 ನೋಡೆಲ್ ಅಧಿಕಾರಿಗಳು ಕೂಡ ಕಾರ್ಯ ಆರಂಭಿಸಿದರು. ಸಮೀಕ್ಷಾ ಕಾರ್ಯದ ಪೂರ್ವಭಾವಿಯಾಗಿ ಜಿಲ್ಲೆಯಿಂದ  3 ಮಾಸ್ಟರ್ ಟ್ರೇನರ್‌ಗಳನ್ನು ರಾಜ್ಯಮಟ್ಟದಲ್ಲಿ ನಿಯೋಜಿಸಲಾಗಿತ್ತು. ಜಿಲ್ಲಾ ಮಟ್ಟದ ಮಾಸ್ಟರ್ಸ್ ಟ್ರೇನರ್‌ಗಳಿಂದ ತಾಲ್ಲೂಕು ಮಟ್ಟದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ ತಾಲ್ಲೂಕು ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಮೀಕ್ಷೆ ದತ್ತಾಂಶ ಸಂಗ್ರಹ ಆರಂಭಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.