ADVERTISEMENT

ಫೇಸ್‌ಬುಕ್‌ನಲ್ಲಿ ಪರಿಚಯ: ಬಾಲಕಿಯೊಂದಿಗೆ 2ನೇ ಮದುವೆ

ಮನೆಯವರ ಸಹಕಾರದಿಂದಲೇ ಮದುವೆ * ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 5:22 IST
Last Updated 27 ಜನವರಿ 2022, 5:22 IST

ಹಿರಿಯೂರು: ಚಳ್ಳಕೆರೆ ತಾಲ್ಲೂಕು ಸಾಣಿಕೆರೆ ಗ್ರಾಮದ ಮಂಜುನಾಥ ಎಂಬಾತ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಬಾಲಕಿಯನ್ನು ಮನೆಯವರ ಸಹಕಾರದಿಂದ 2ನೇ ವಿವಾಹವಾಗಿದ್ದಾನೆ. ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ಹಿರಿಯೂರು ತಾಲ್ಲೂಕಿನ 17 ವರ್ಷದ ಬಾಲಕಿಯನ್ನು 20 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡ 27 ವರ್ಷದ ಮಂಜುನಾಥ, ಆಕೆ ಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ‘ನೀನು ತುಂಬಾ ಇಷ್ಟ ಆಗಿದ್ದೀಯಾ, ಮದುವೆಯಾಗೋಣ’ ಎಂದು ಒತ್ತಾಯಿಸಿದ್ದ.

ಜ. 13ರಂದು ಸಂಕ್ರಾಂತಿ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಿದ್ದ ಬಾಲಕಿ ಮರಳಿ ಜ. 17ರಂದು ತುಮಕೂರಿಗೆ ಹೋಗಲು ಹಿರಿಯೂರಿನ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾಗ, ಶಿರಾದಲ್ಲಿ ಇಳಿದುಕೊಳ್ಳಲು ಹೇಳಿದ್ದಾನೆ. ಆ ವೇಳೆ ಮಂಜುನಾಥ ತನ್ನ ತಾಯಿ, ಅಕ್ಕ ಮತ್ತು ತಂಗಿಯ ಜೊತೆ ಕಾರಿನಲ್ಲಿ ಬಂದು ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಶಿರಾ ಸಮೀಪದ ಆಂಜನೇಯ ಸ್ವಾಮಿ ದೇಗುಲದಲ್ಲಿ ಮದುವೆಯಾಗಿದ್ದಾನೆ.

ADVERTISEMENT

‘ಮದುವೆಯಾದ ಬಳಿಕ ನನ್ನನ್ನು ಸಾಣಿಕೆರೆಗೆ ಕರೆದುಕೊಂಡು ಹೋದರು. ನನ್ನ ದೊಡ್ಡಪ್ಪನ ಮಗನನ್ನು ಫೋನ್‌ನಲ್ಲಿ ವಿಚಾರಿಸಿದಾಗ, ಮಂಜುನಾಥನಿಗೆ ಎರಡನೇ ಮದುವೆಯಾಗಿರುವ ವಿಷಯ ತಿಳಿಯಿತು. ಮದುವೆಯಾದ ರಾತ್ರಿ ವಿರೋಧಿಸಿದರೂ ಮಂಜುನಾಥ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ’ ಎಂದು ಬಾಲಕಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾಳೆ.

ಜ. 22ರಂದು ವಿಷಯ ತಿಳಿದ ಸಂತ್ರಸ್ತೆಯ ತಾಯಿ ಊರಿಗೆ ಕರೆದೊಯ್ದರು. ಸಂಬಂಧಿಕರ ಜೊತೆ ಚರ್ಚಿಸಿ ತಡವಾಗಿ ದೂರು ನೀಡಿದ್ದಾಳೆ. ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಎಸ್ಐ ಪರಮೇಶ್ ತನಿಖೆ ಕೈಗೆತ್ತಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.