ADVERTISEMENT

ಪೆಟ್ರೋಲ್‌ ಬಂಕ್‌ ಮುಂದೆ ಗಣಿ ಲಾರಿಗಳ ಸಾಲು

ಚಳ್ಳಕೆರೆ ಗೇಟ್‌ನಲ್ಲಿರುವ ಬಂಕ್‌ ಮುಂದೆ ಲಾರಿಗಳ ಸರದಿ; ನಿತ್ಯ ಟ್ರಾಫಿಕ್‌ ಜಾಮ್‌ನಿಂದ ಸಂಕಟ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:38 IST
Last Updated 28 ಡಿಸೆಂಬರ್ 2025, 5:38 IST
ಚಳ್ಳಕೆರೆ ಗೇಟ್‌ನಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಕಬ್ಬಿಣದ ಅದಿರು ತುಂಬಿದ ಲಾರಿಗಳಿಗೆ ಡೀಸೆಲ್‌ ತುಂಬುತ್ತಿರುವುದು
ಚಳ್ಳಕೆರೆ ಗೇಟ್‌ನಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿ ಕಬ್ಬಿಣದ ಅದಿರು ತುಂಬಿದ ಲಾರಿಗಳಿಗೆ ಡೀಸೆಲ್‌ ತುಂಬುತ್ತಿರುವುದು   

ಚಿತ್ರದುರ್ಗ: ಕಬ್ಬಿಣದ ಅದಿರು ತುಂಬಿದ ನೂರಾರು ಗಣಿ ಲಾರಿಗಳು ನಗರದ ಚಳ್ಳಕೆರೆ ಗೇಟ್‌ನಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಡೀಸೆಲ್‌ ತುಂಬಿಸಲು ಲಗ್ಗೆ ಹಾಕುತ್ತಿವೆ. 1 ಕಿ.ಮೀ.ಗೂ ಹೆಚ್ಚು ದೂರ ಲಾರಿಗಳು ಸಾಲುಗಟ್ಟಿ ನಿಲ್ಲುವ ಕಾರಣ ಹಳೇ ರಾಷ್ಟ್ರೀಯ ಹೆದ್ದಾರಿ ಸರ್ವೀಸ್‌ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ.

‘ಸಂಜೆ 6.30ರಿಂದ ಮಧ್ಯರಾತ್ರಿವರೆಗೂ ಗಣಿ ಲಾರಿಗಳು ಡೀಸೆಲ್‌ ತುಂಬಿಸಿಕೊಳ್ಳಲು ಸಾಲುಗಟ್ಟಿ ನಿಂತಿರುತ್ತವೆ. ನಗರ ವ್ಯಾಪ್ತಿಯೊಳಗೆ ಗಣಿಲಾರಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೂ ನಿಷೇಧ ಆದೇಶ ಉಲ್ಲಂಘಿಸಿ ಗಣಿ ಲಾರಿಗಳು ಚಳ್ಳಕೆರೆ ಗೇಟ್‌ನಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಬರುತ್ತಿವೆ. ನಗರದೊಳಗೆ ಲಾರಿಗಳು ಬಂದರೂ ಟ್ರಾಫಿಕ್‌ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ’ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಗಡಿಭಾಗದಲ್ಲಿ ಹಲವು ಕಂಪನಿಗಳು ಕಬ್ಬಿಣದ ಅದಿರು ಗಣಿಗಾರಿಕೆ ನಡೆಸುತ್ತಿವೆ. ಅದಿರು ತುಂಬಿದ ಸಾವಿರಾರು ಲಾರಿಗಳು ನಗರದ ಹೊರವಲಯದ ರಸ್ತೆಗಳ ಮೂಲಕ ಬಳ್ಳಾರಿಯತ್ತ ಸಾಗುತ್ತವೆ. ಭಾರಿ ವಾಹನಗಳ ಓಡಾಟದಿಂದ ಹೊರವಲಯದ ರಸ್ತೆಗಳು ಕಿತ್ತು ಹೋಗಿದ್ದು ಆ ಭಾಗದಲ್ಲಿ ವಾಸಿಸುವ ಜನರಿಗೆ ದೂಳಿನ ಕಾಟ ತೀವ್ರಗೊಂಡಿದೆ. ಈಚೆಗೆ ಲಾರಿಗಳು ಡೀಸೆಲ್‌ ಹಾಕಿಸುವ ನೆಪದಲ್ಲಿ ನಗರಕ್ಕೂ ಪ್ರವೇಶಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಲಾರಿಗಳು ಪೆಟ್ರೋಲ್‌ ಬಂಕ್‌ಗೆ ಬಂದಾಗ ಅಲ್ಲಿನ ಸಿಬ್ಬಂದಿ ಸ್ಥಳೀಯ ಗ್ರಾಹಕರಿಗೆ ಪೆಟ್ರೋಲ್‌, ಡೀಸೆಲ್‌ ಹಾಕುವುದನ್ನೇ ಸ್ಥಗಿತಗೊಳಿಸುತ್ತಾರೆ. ಸಾರ್ವಜನಿಕ ವಾಹನಗಳಿಗೆ ಪ್ರವೇಶವೇ ಇಲ್ಲದಂತೆ ಬರೀ ಗಣಿ ಲಾರಿಗಳೇ ಬಂಕ್‌ ಆವರಣವನ್ನು ಆವರಿಸಿಕೊಂಡಿರುತ್ತವೆ. ನಗರದ ಹೃದಯ ಭಾಗದಲ್ಲಿರುವ ಬಂಕ್‌ನಲ್ಲಿ ಸಾರ್ವಜನಿಕರನ್ನು ಹೊರಗಿಟ್ಟು ಗಣಿ ಲಾರಿಗಳಿಗೆ ಮಾತ್ರ ಡೀಸೆಲ್‌ ತುಂಬುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಗಣಿ ಮಾಲೀಕರು, ಟ್ರಾನ್ಸ್‌ಪೋರ್ಟ್‌ ಕಂಪನಿ ಮಾಲೀಕರು, ಪೆಟ್ರೋಲ್‌ ಬಂಕ್‌ ಮಾಲೀಕರು ಹಾಗೂ ಸ್ಥಳೀಯ ಪೊಲೀಸರು ಶಾಮೀಲಾಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಬಸವೇಶ್ವರ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಡಾನ್‌ ಬಾಸ್ಕೊ ಶಾಲೆ, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಶಾಲೆಗಳಿಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಗಣಿ ಲಾರಿಗಳು ಸೃಷ್ಟಿಸುತ್ತಿರುವ ಟ್ರಾಫಿಕ್‌ನಿಂದ ತೀವ್ರ ತೊಂದರೆಯಾಗುತ್ತಿದೆ. ಮಕ್ಕಳ ಪ್ರಾಣಕ್ಕೂ ಕಂಟಕ ಎದುರಾಗಿದೆ’ ಎಂದು ಶಿಕ್ಷಕರೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಗಣಿ ಲಾರಿಗಳು ನಗರದೊಳಗೆ ಬಾರದಂತೆ ಸೂಚನೆ ನೀಡಲಾಗಿದೆ. ಅವರು ನಗರ ಪ್ರವೇಶಿಸಿದರೆ ದಂಡ ವಿಧಿಸಲಾಗುವುದು. ಗಣಿ ಲಾರಿಗಳು ಬಂದರೆ ಡೀಸೆಲ್‌ ಹಾಕದಂತೆ ಬಂಕ್‌ ಮಾಲೀಕರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.