ADVERTISEMENT

ಒಳಗಿನ ಶತ್ರುಗಳ ಬಗ್ಗೆ ಎಚ್ಚರ ಅಗತ್ಯ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 26 ಮೇ 2025, 15:27 IST
Last Updated 26 ಮೇ 2025, 15:27 IST
ಹಿರಿಯೂರಿನಲ್ಲಿ ನಾಗರಿಕರ ವೇದಿಕೆ ವತಿಯಿಂದ ಸೋಮವಾರ ತಿರಂಗಯಾತ್ರೆ ನಡೆಸಲಾಯಿತು
ಹಿರಿಯೂರಿನಲ್ಲಿ ನಾಗರಿಕರ ವೇದಿಕೆ ವತಿಯಿಂದ ಸೋಮವಾರ ತಿರಂಗಯಾತ್ರೆ ನಡೆಸಲಾಯಿತು    

ಹಿರಿಯೂರು: ದೇಶದ ಹೊರಗಿನ ಶತ್ರುಗಳ ಒಟ್ಟೊಟ್ಟಿಗೆ ದೇಶದ ಒಳಗಿರುವ ಶತ್ರುಗಳ ಬಗೆಗೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ನಗರದಲ್ಲಿ ಆಯೋಜಿಸಿದ್ದ ತಿರಂಗಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕೆಲವರು, ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಸಂಶಯದಿಂದ ನೋಡುವ, ಕುಹಕದ ಮಾತನಾಡುವ ಮೂಲಕ ಸೈನಿಕರನ್ನು ಅವಮಾನಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರು ನಮ್ಮ ನಿಜವಾದ ಶತ್ರುಗಳು. ಪ್ರಾಣವನ್ನು ಪಣಕ್ಕಿಟ್ಟು ವೈರಿ ರಾಷ್ಟ್ರದ ಒಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದರ ಬಗ್ಗೆ ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದರೂ ಅದನ್ನು ನಂಬುವ ಮನಸ್ಥಿತಿಯಲ್ಲಿ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಇಂತಹವರ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ADVERTISEMENT

‘ಉಗ್ರರ ವಿರುದ್ಧದ ಹೋರಾಟ ನಿಂತಿಲ್ಲ. ಉಗ್ರರು ಸರ್ವನಾಶ ಆಗುವವರೆಗೆ ಹೋರಾಟ ನಡೆಯಲಿದೆ. ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ಈಗಾಗಲೇ ತಕ್ಕ ಬೆಲೆ ತೆತ್ತಿದ್ದರೂ ಪಾಠ ಕಲಿತಿಲ್ಲ. ಭಾರತದ ಸೈನ್ಯದ ಶಕ್ತಿ ಏನೆಂಬುದನ್ನು ನಮ್ಮ ಯೋಧರು ಜಗತ್ತಿಗೆ ತೋರಿಸಿದ್ದಾರೆ. ನಮ್ಮ ಶಕ್ತಿಯನ್ನು ನೋಡಿ ಅಂಜಿದ ಪಾಕಿಸ್ತಾನ ನಮ್ಮ ಮುಂದೆ ಶರಣಾಗಿದೆ. ಆದರೆ, ಅವರನ್ನು ಪೂರ್ಣ ನಂಬುವ ಮೂರ್ಖರು ನಾವಲ್ಲ. ಯೋಧರ ಬಗ್ಗೆ ಸಂಶಯದ ಮಾತುಗಳನ್ನಾಡುವ ಮುಖಂಡರು ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳದೇ ಹೋದರೆ ದೇಶದ ಜನ ಸರಿಯಾದ ಪಾಠ ಕಲಿಸುತ್ತಾರೆ’ ಎಂದು ಕಾರಜೋಳ ಎಚ್ಚರಿಸಿದರು.

ಭಾರತ ಮಾತೆಯ ಸಿಂಧೂರದಂತಿರುವ ಜಮ್ಮು ಮತ್ತು ಕಾಶ್ಮೀರವನ್ನು ಮತ್ತೊಮ್ಮೆ ಅಖಂಡವಾಗಿ ಕಣ್ತುಂಬಿಕೊಳ್ಳುವ ದಿನಗಳು ತೀರಾ ಹತ್ತಿರದಲ್ಲಿದೆ ಎಂದು ಶಿವಮೊಗ್ಗ ವಿಭಾಗದ ವ್ಯವಸ್ಥ ಪ್ರಮುಖ್ ಲೋಹಿತಾಶ್ವ ತಿಳಿಸಿದರು.

ಕೆಂಚಪ್ಪ, ಬಸವ ರಮಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ತಾಲ್ಲೂಕು ಘಟಕದ ಅಧ್ಯಕ್ಷ ಅಭಿನಂದನ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್, ಮೀಸೆ ಮಹಲಿಂಗಪ್ಪ, ರವೀಂದ್ರಪ್ಪ, ವಿ.ವಿಶ್ವನಾಥ್, ರಾಜಣ್ಣ, ಕೇಶವಮೂರ್ತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.