ADVERTISEMENT

ಚಿತ್ರದುರ್ಗ: ಅಡಿಕೆ ವ್ಯಾಪಾರಿಗೆ ಐಟಿ ಬಿಸಿ

ಮನೆಗೆ ಬೀಗಮುದ್ರೆ, ಅಂಗಡಿ ಕಡತ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 9:56 IST
Last Updated 22 ಅಕ್ಟೋಬರ್ 2018, 9:56 IST
   

ಚಿತ್ರದುರ್ಗ: ಅಡಿಕೆ ವ್ಯಾಪಾರಿ ಉದಯ ಶೆಟ್ಟಿ ಅವರ ಮನೆ ಹಾಗೂ ಅಡಿಕೆ ಮಂಡಿಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಉದಯ ಶೆಟ್ಟಿ ಅವರು ಮನೆಯಲ್ಲಿ ಇಲ್ಲದ ಪರಿಣಾಮ ಜೆಸಿಆರ್‌ ಬಡಾವಣೆಯ 6ನೇ ಕ್ರಾಸಿನಲ್ಲಿರುವ ಅವರ ಮನೆಗೆ ಸೋಮವಾರ ಬೀಗ ಮುದ್ರೆ ಮಾಡಲಾಗಿದೆ.

ಹುಬ್ಬಳ್ಳಿಯಿಂದ ನಗರಕ್ಕೆ ಬಂದ ಅಧಿಕಾರಿಗಳ ತಂಡ ಹಳೆ ಬೆಂಗಳೂರು ರಸ್ತೆಯಲ್ಲಿರುವ ಶ್ರೀಗುರು ಕೋಗುಂಡೇಶ್ವರ ಟ್ರೇಡರ್ಸ್‌ ಹಾಗೂ ಮನೆಯ ಮೇಲೆ ದಾಳಿ ನಡೆಸಿತು. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲೆಕ್ಕಪರಿಶೋಧಕರನ್ನು ವಿಚಾರಣೆಗೆ ಒಳಪಡಿಸಿತು. ಕೆಲ ಕಡತಗಳನ್ನು ವಶಕ್ಕೆ ಪಡೆಯಿತು.

ADVERTISEMENT

ಉದಯ ಅವರು ಮನೆಯಲ್ಲಿ ಇಲ್ಲದ ಪರಿಣಾಮ ಅಧಿಕಾರಿಗಳು ಕಾದುಕುಳಿತರು. ಅಡಿಕೆ ವ್ಯಾಪಾರಿ ಬಾರದೇ ಇರುವುದರಿಂದ ಮನೆಗೆ ಬೀಗ ಹಾಕಿ ಮೊಹರುಮಾಡಲಾಗಿದೆ. ‘ಅನುಮತಿ ಇಲ್ಲದೇ ಮನೆಯ ಬಾಗಿಲು ತೆರೆಯುವಂತಿಲ್ಲ’ ಎಂದು ಗೇಟ್‌ ಹಾಗೂ ಮನೆಯ ಮುಂಬಾಗಿಲಿಗೆ ನೋಟಿಸ್‌ ಅಂಟಿಸಲಾಗಿದೆ.

ಮೂಲತಃ ಕಡೂರಿನ ಉದಯ ಶೆಟ್ಟಿ ಹಲವು ವರ್ಷಗಳಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಅಡಿಕೆ ಮಂಡಿ ಹೊಂದಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪ ಇವರ ಮೇಲಿದೆ. ಸ್ಥಳೀಯ ಪೊಲೀಸರು ಐಟಿ ಅಧಿಕಾರಿಗಳಿಗೆ ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.