ADVERTISEMENT

ಜಲಜೀವನ್ ಮಿಷನ್ ಕಾಮಗಾರಿ: ತಹಶೀಲ್ದಾರ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:28 IST
Last Updated 17 ಡಿಸೆಂಬರ್ 2025, 6:28 IST
ಕೇಂದ್ರದ ಜಲ ಜೀವನ್ ಮಿಷನ್ ಯೋಜನೆಯಡಿ ಚಳ್ಳಕೆರೆ ತಾಲ್ಲೂಕಿನ ಗೊರ್ಲಕಟ್ಟೆಯಲ್ಲಿ ಕುಡಿಯುವ ನೀರಿನ ಸಂಪರ್ಕದ ಸಲುವಾಗಿ ಮನೆ ಮನೆಗೆ ಅಳವಡಿಸಿದ ಪೈಪ್‌ಲೈನ್ ಕಾಮಗಾರಿಯನ್ನು ಸೋಮವಾರ ತಹಶೀಲ್ದಾರ್ ರೇಹಾನ್‍ ಪಾಷಾ  ಪರಿಶೀಲಿಸಿದರು
ಕೇಂದ್ರದ ಜಲ ಜೀವನ್ ಮಿಷನ್ ಯೋಜನೆಯಡಿ ಚಳ್ಳಕೆರೆ ತಾಲ್ಲೂಕಿನ ಗೊರ್ಲಕಟ್ಟೆಯಲ್ಲಿ ಕುಡಿಯುವ ನೀರಿನ ಸಂಪರ್ಕದ ಸಲುವಾಗಿ ಮನೆ ಮನೆಗೆ ಅಳವಡಿಸಿದ ಪೈಪ್‌ಲೈನ್ ಕಾಮಗಾರಿಯನ್ನು ಸೋಮವಾರ ತಹಶೀಲ್ದಾರ್ ರೇಹಾನ್‍ ಪಾಷಾ  ಪರಿಶೀಲಿಸಿದರು   

ಚಳ್ಳಕೆರೆ: ಕುಡಿಯುವ ನೀರಿನ ಸಂಪರ್ಕದ ಸಲುವಾಗಿ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಪ್ರತಿ ಮನೆ ಮನೆಗೆ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯನ್ನು ತಹಶೀಲ್ದಾರ್ ರೇಹಾನ್‍ ಪಾಷಾ ಪರಿಶೀಲಿಸಿ, ಅಸಮಾಧಾನ ವ್ಯಕ್ತಪಡಿಸಿದರು.

‘ಗೊರ್ಲಕಟ್ಟೆ, ಕೆರೆಹಿಂದಲಹಟ್ಟಿ, ನಂದನಹಳ್ಳಿ, ನರಹರಿನಗರ, ಡಿ.ಉಪ್ಪಾರಹಟ್ಟಿ, ಅಡವಿ ಚಿಕ್ಕೆನಹಳ್ಳಿ, ಮೀರಾಸಾಬಿಹಳ್ಳಿ, ದೊಡ್ಡೇರಿ ಮುಂತಾದ ಗ್ರಾಮಕ್ಕೆ  ಭೇಟಿ ನೀಡಿದಾಗ ಯೋಜನೆಯಡಿ ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿ ಕುರಿತ ಸಂಪೂರ್ಣ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಗ್ರಾಮದಲ್ಲಿ ಅಗೆದ ರಸ್ತೆ ಸರಿಯಾಗಿ ಮುಚ್ಚದಿರುವ ಕಾರಣ ಎಲ್ಲೆಂದರಲ್ಲಿ ತಗ್ಗು – ಗುಂಡಿ ನಿರ್ಮಾಣವಾಗಿದ್ದು ರಸ್ತೆ ಹದಗೆಟ್ಟಿವೆ. ಕಾಮಗಾರಿ ಕಳಪೆಯಾಗಿರುವುದರಿಂದ ಅಳವಡಿಸಿದ ಪೈಪ್‌ಲೈನ್ ಮತ್ತು ನಲ್ಲಿಗಳು ಕಿತ್ತು ಹೋಗಿವೆ. ಒಂದೊಂದು ಮನೆಗೆ 3-4 ಕಡೆಗೆ ಅವೈಜ್ಞಾನಿಕವಾಗಿ ಪೈಪ್ ಸಂಪರ್ಕ ಕಲ್ಪಿಸಲಾಗಿದೆ. ಹಂತ ಹಂತವಾಗಿ ಕಾಮಗಾರಿ ಕೆಲಸವನ್ನು ಯಾರೂ ವೀಕ್ಷಣೆ ಹಾಗೂ ಪರಿಶೀಲನೆ ನಡೆಸಿಲ್ಲದಿರುವುದು ಕಾಂಗಾರಿ ಕಳಪೆಗೆ ಕಾರಣವಾಗಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.

ADVERTISEMENT

ದೊಡ್ಡೇರಿ ಗ್ರಾಮದ ಮುಖಂಡ ಈರಣ್ಣ ಮಾತನಾಡಿ, ‘ಅಧಿಕಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣವಾಗಿ ವಿಫಲವಾಗಿದೆ. ಪೈಪ್‌ಲೈನ್ ಅವೈಜ್ಞಾನಿಕವಾಗಿ ಅಳಡಿಸಿರುವುದರಿಂದ ಮನೆಗೆ ಪೈಪ್ ಮೂಲಕ ನೀರು ಸರಬರಾಜು ಆಗುತ್ತಿಲ್ಲ. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಹಾಗಾಗಿ ಈ ಯೋಜನೆಯಡಿ ನಡೆದಿರುವ ಕಾಮಗಾರಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.

ಚಿತ್ರದುರ್ಗದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ತಂಡ ರಚನೆಗೆ ಜಿಲ್ಲಾಧಿಕಾರಿಗೆ ಸೂಚಿಸಿದ್ದನ್ನು ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.