
ಪ್ರಜಾವಾಣಿ ವಾರ್ತೆ
ಚಿತ್ರದುರ್ಗ: ‘ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ನ. 22ರಂದು ಬೆಂಗಳೂರಿನ ಜೆ.ಪಿ.ಭವನದಲ್ಲಿ ಪಕ್ಷದ ಬೆಳ್ಳಿ ಹಬ್ಬ ಅರ್ಥಪೂರ್ಣವಾಗಿ ನಡೆಯಲಿದೆ. ಜಿಲ್ಲೆಯಿಂದಲೂ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸುವರು’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಹೇಳಿದರು.
‘ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆಯೂ ಪ್ರಾದೇಶಿಕ ಪಕ್ಷ 25 ವರ್ಷ ಅಸ್ಥಿತ್ವದಲ್ಲಿರುವುದು ಸಾಧನೆಯೇ ಸರಿ. ಕಳೆದೆರಡು ದಶಕದಿಂದ ಹಲವು ಪ್ರಾದೇಶಿಕ ಪಕ್ಷಗಳು ಪ್ರಾರಂಭವಾಗಿ ನೆಲ ಕಚ್ಚಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಸವಾಲುಗಳ ನಡುವೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. 25ನೇ ವರ್ಷದ ಆಚರಣೆ ಅಂಗವಾಗಿ ಮುಖಂಡರು ಪಕ್ಷವನ್ನು ಮತ್ತಷ್ಟು ಬಲಪಡಿಸಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ವಿವಿಧ ಚಟುವಟಿಕೆಗಳು ಆರಂಭವಾಗಲಿವೆ. ಪಕ್ಷದ ಸದಸ್ಯತ್ವ, ಪದಾಧಿಕಾರಿಗಳ ನೇಮಕ ಸೇರಿದಂತೆ ಪಕ್ಷ ಸಂಘಟನೆಯ ಕೆಲಸಗಳು ನಡೆಯಲಿವೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಯಶಸ್ವಿಯಾಗಿದೆ. ಅದರಂತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆದ್ದು ಸರ್ಕಾರ ರಚಿಸಲಿದ್ದಾರೆ’ ಎಂದರು.
ಜೆಡಿಎಸ್ ಮುಖಂಡರಾದ ರವೀಂದ್ರ ಮಾತನಾಡಿ ‘ಪ್ರಾದೇಶಿಕ ಪಕ್ಷವನ್ನು 25 ವರ್ಷಗಳ ಕಾಲ ನಡೆಸಿಕೊಂಡು ಬರುವುದು ಸುಲಭದ ಮಾತಲ್ಲ, ಜೆಡಿಎಸ್ ಪಕ್ಷ ದೇಶಕ್ಕೆ ಪ್ರಧಾನ ಮಂತ್ರಿಯನ್ನು ಕೊಟ್ಟಿದೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದೆ. ಇದಲ್ಲದೇ ಜೆಡಿಎಸ್ ಸದಾ ರೈತರ ಪರವಾಗಿ ನಿಲ್ಲುತ್ತದೆ. ಸದ್ಯ ಬೆಂಗಳೂರಿನಲ್ಲಿ ಬೆಳ್ಳಿಹಬ್ಬ ನಡೆಯಲಿದೆ. ಮುಂದಿನ ದಿನದಲ್ಲಿ ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಆಚರಣೆ ನಡೆಯಲಿದೆ’ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ, ಮುಖಂಡರಾದ ಮಂಜುನಾಥ್, ಗಣೇಶ್, ಪರಮಶ್ವರಪ್ಪ, ಹನುಮಂತಪ್ಪ, ವಿರೇಶ್, ತಿಪ್ಪೇಸ್ವಾಮಿ, ಮಂಜಣ್ಣ, ಶಂಕರ್ ವೀರಭದ್ರಪ್ಪ, ರಮೇಶ್ ಕುಮಾರ್, ಶೇಖರ್ ಮೂರ್ತಿ, ಚಿದಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.